Showing posts with label ಕಥೆ या ಹರಟೆ-ಉತ್ತರ ಭೂಪ uttara bhoopa. Show all posts
Showing posts with label ಕಥೆ या ಹರಟೆ-ಉತ್ತರ ಭೂಪ uttara bhoopa. Show all posts

Tuesday, 1 December 2020

ಉತ್ತರ ಭೂಪ uttara bhoopa


Imaginative story

ಎಷ್ಟೋ ವರ್ಷಗಳ ಹಿಂದೆಯೇ ನಾನೊಂದು ನಿರ್ಧಾರವನ್ನು ತೆಗೆದುಕೊಂಡಿದ್ದೆ. ಅದೇನೆಂದರೆ ನಿರುದ್ಯೋಗಿಯಾಗಿದ್ದರೂ ಪರವಾಗಿಲ್ಲ, ಕೆಲಸ ಮಾಡಿದರೆ ಪತ್ರಿಕಾ ಉದ್ಯಮದಲ್ಲಿಯೇ ನನ್ನ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.  ನನ್ನ ಮನದಾಸೆ ಕೊನೆಗೂ ನೆರವೇರಿತು.  ಹೇಗೋ ಒಂದು ದಿನ ಪತ್ರಿಕೆಗೆ ಸಹಾಯಕ ವರದಿಗಾರನಾಗಿ ಕೆಲಸವೇನೂ ಸಿಕ್ಕಿತು.  ರಸ್ತೆ ಗಲ್ಲಿಗಳಲ್ಲಿ ತಿರುಗಾಡುತ್ತ ಮುಖ್ಯ ವರದಿಗಾರನಿಗೆ ಸಕಾಲದಲ್ಲಿ ಮಾಹಿತಿಗಳನ್ನು ಒದಗಿಸುತ್ತಾ ಕೆಲಸವನ್ನು ಪ್ರಾರಂಭಿಸಿದೆ. 

ದಿನಪತ್ರಿಕೆಯವರ ಸಂಭಾವನೆ ಏನೂ ಸಾಲದೆಂದು, ಬೇರೆ ಯಾವುದಾದರೂ ಕೆಲಸ ಮಾಡಿದರೆ ಹೆಚ್ಚು ಹಣ ಸಿಗಬಹುದೆಂದು ನನ್ನ Boss ಮುಖ್ಯ ವರದಿಗಾರ ಕೆಲಸವನ್ನು ಬಿಟ್ಟಿದ್ದರಿಂದ ನನಗೆ ಮುಖ್ಯ ವರದಿಗಾರನಾಗಿ ಬಡ್ತಿಯೂ ಸಿಕ್ಕಿತು. ಬಹಳ ಸಂತೋಷದಿಂದಲೇ ಕೆಲಸವನ್ನು ಹುರುಪಿನಿಂದ ಮಾಡುತ್ತಿದ್ದೆ.  ಆದರೆ ನನ್ನ ದುರದೃಷ್ಟವಶಾತ್ ನಮ್ಮ ದಿನ ಪತ್ರಿಕೆಯ ಮಾರಾಟ ಮಾತ್ರ ಬಹಳ ಶೋಚನೀಯವಾಗಿತ್ತು.  ಕೊನೆ ಕೊನೆಗೆ ಪತ್ರಿಕೆ ಮಾರಾಟವೇ ಆಗದೆ ಬೋಂಡ ಭಜಿ ಮಾರುವವರ ಹತ್ತಿರ tie-up ಮಾಡಿಕೊಂಡು ಬಿಸಿ ಬಿಸಿ ತಿಂಡಿಯನ್ನು  ಬಿಸಿ ಬಿಸಿ ಸುದ್ದಿಯೊಂದಿಗೆ  ಕಟ್ಟಿಕೊಡಲು  ನಮ್ಮ ಮಾಲೀಕನಿಗೆ ಅಲ್ಪ ಸ್ವಲ್ಪ ಹಣ ಸಿಗುತ್ತಿತ್ತು.   ಮತ್ತು ನನ್ನ ಸಂಭಾವನೆಗೆ ಅಷ್ಟು ಧಕ್ಕೆ ಆಗಲಿಲ್ಲ.  ಅದೇನೇ ಇದ್ದರೂ ಆದಷ್ಟು ಬೇಗ ಇನ್ನಾವುದಾದರೂ ಪತ್ರಿಕಾ ಕಾರ್ಯಾಲಯದಲ್ಲಿ ಕೆಲಸಕ್ಕೆ ಪ್ರಯತ್ನವಂತೂ ಮುಂದುವರೆಸಿದ್ದೆ. 

ಒಂದು ದಿನ ನನಗೆ ಯಶಃ ಪ್ರಾಪ್ತಿಯಾಗಿ ಹೊಸ ಕೆಲಸಕ್ಕೆ ಸೇರಿದ್ದೂ ಆಯ್ತು. ಆದರೆ ಈ ಪತ್ರಿಕೆಗೂ ಅಷ್ಟೇನು ಚಲಾವಣೆ ಇಲ್ಲದಿದ್ದರೂ ಉಪಸಂಪಾದಕ ಹುದ್ದೆ ಆಗಿದ್ದರಿಂದ ಸಂತೋಷದಿಂದ ಒಪ್ಪಿದೆ.

ನನಗೆ ಕೊಟ್ಟ ಮೊದಲ ವಾರದ ಕಾರ್ಯ ಕಚೇರಿಗೆ 'ನಿಮ್ಮ ಪತ್ರ - ನಮ್ಮ ಉತ್ತರ' ವಿಭಾಗಕ್ಕೆ  ಬಂದ ಎಲ್ಲಾ ಪತ್ರಗಳಿಗೆ ಚೂಟಿಯಾದ ಹಾಗೂ ಚುರುಕಾದ ಉತ್ತರ ಬರೆದು ಪ್ರತಿ ಭಾನುವಾರದ ಪತ್ರಿಕೆಯಲ್ಲಿ ಪ್ರಕಟಿಸುವುದು.  ಆದರೆ ಸ್ವಾರಸ್ಯದ ಸಂಗತಿ ಏನೆಂದರೆ ಪತ್ರಿಕಾ ಕಾರ್ಯಾಲಯಕ್ಕೆ ಯಾವ ಪತ್ರಗಳೂ ಬರುತ್ತಿರಲಿಲ್ಲ. ನಾನೇ ಪ್ರಶ್ನೆಗಳನ್ನು ಸೃಷ್ಟಿಸಿ ಬೇರೆಯವರ ಹೆಸರು ಕೊಟ್ಟು ಉತ್ತರ ಕೊಡಬೇಕೆಂದು, ನನ್ನ ಕೆಲಸದ ಮರ್ಮವನ್ನು ಮುಖ್ಯ ಸಂಪಾದಕರು ನನಗೆ ತಿಳಿಹೇಳಿದರು.  ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕೆಂದು ತೀರ್ಮಾನಿಸಿ ಕೆಲವು ಪ್ರಶ್ನೆಗಳನ್ನು ನಾನೇ ಹುಟ್ಟು ಹಾಕಿ ಉತ್ತರಗಳನ್ನು ಕೊಟ್ಟು ಭಾನುವಾರದಂದು ಪ್ರಕಟಿಸಿದೆ.

ಆ ನನ್ನ ಮೊದಲ ಪ್ರಕಟಣೆಯ ಪ್ರಶ್ನೆಗಳು ಹಾಗೂ ಉತ್ತರಗಳು ಯಾವುವೆಂದು ನೀವು ಬೇಸರಿಸದೆ ಓದಿರೆಂದು ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ.
imp- ಓದುವಾಗ ಹೆಸರು, ಊರು ಹಾಗೂ ಪ್ರಶ್ನೆ ಈ ಮೂರನ್ನೂ ಉತ್ತರದ ಜೊತೆಗೆ ಗಮನಿಸಿರಿ.
೧.  ಹೆಸರಿಲ್ಲ, ಮೈಸೂರು
ಪ್ರಶ್ನೆ     :ಯಾರು ನಿಮ್ಮತ್ತರಗಳಿಗೆ ಪ್ರೇರಣಾ?
ಉತ್ತರ :ಪ್ರೇರಣಾಳ ಮಾತಾಶ್ರೀ.  ಅರ್ಥಾತ್, ಪ್ರಿಯ ಪ್ರೇರಣಾಳ ಪಿತನ ಪ್ರಿಯ ಪತ್ನಿ.

೨. ಉತ್ತರೆ, ಸತ್ಯಮಂಗಲ
ಪ್ರಶ್ನೆ   :ಸತ್ಯವನ್ನೇ ಹೇಳಿರಿ,  ನನ್ನ ಪತ್ರ ಓದಿದ್ದೀರಾ?
ಉತ್ತರ:ಸತ್ಯ ಇಲ್ಲದಿದ್ದರೆ ಉತ್ತರೆಗೆ ಉತ್ತರ ಕೊಡಲು ಸತ್ಯವಾಗಿಯೂ ಸಾಧ್ಯವಾ?

೩. ಭಾವನ, ಭಾವನಗರ
ಪ್ರಶ್ನೆ    :ನೀವೆಲ್ಲಿ ಸಿಗುತ್ತೀರಿ?
ಉತ್ತರ:ಬರುವ ಭಾನುವಾರ ಭಾವನಗರದ ಬಂದರ್ ಗೆ ಬಂದರೆ ಭಾವನಳಿಗೆ ಬಲಿಪಶುವಾಗಲು ಬಲವಂತದಿಂದಲ್ಲದಿದ್ದರೂ ಭಂಡಧೈರ್ಯದಿಂದ ಬಡ ಬಡಾಂತ ಬಡಪಾಯಿ ಬರುವನು.  ಬರುವಿರಾ ಬೇಗಾ?  ಬರುವಾಗ ಭಾವನಾಳ ಬಢಾ ಭಾಯಿ ಬರುವುದು ಬೇಡವೇ ಬೇಡಾಂತ ಭಯದಿಂದ ಬೇಡುವೆ.  ಬಢಾ ಭಾಯಿ ಬದಲಿಗೆ ಬೀಟ್policeರಿಂದ ಬಡ ಬಕ್ರಾಗೆ ಬಿಡ್ರಿಒಂದಿಷ್ಟಾಂತ ಬಡಿಸೋದಿಲ್ಲತಾನೆ?    

೪. ಹೆಸರು ಬೇಡಾ,  ಊರಿಲ್ಲ
ಪ್ರಶ್ನೆ   :ಈ ವಾರದ ನಿಮ್ಮ ತಾರಾಬಲ?
ಉತ್ತರ:ಕಭಿ ಖುಷಿ ಕಭಿ ಗಮ್

೫. ಐಶ್ವರ್ಯ,  ಸನ್ ಸಿಟಿ
ಪ್ರಶ್ನೆ   :ಸುಳ್ಳು ಹೇಳಬೇಡಿ, ನಾನೆಷ್ಟು ಚೆಲುವೆ?
ಉತ್ತರ:ನಿಮ್ಮೊಲುಮೆಯಿಂದಲೇ ಬಾಳು ಬೆಳಕಾಗಿರಲು ಚಂದ್ರಮುಖಿ ನೀ ಎನಗೆ, ಗೊತ್ತೇನೇ.

೬. ಬ್ರಹ್ಮಚಾರಿ, ಹನುಮಂತನಗರ
ಪ್ರಶ್ನೆ   :Love ಮಾಡಿ ಮದುವೆ ಆಗಲೇ ಅಥವಾ ಮದುವೆ ಆಗಿ love ಮಾಡಲೇ?
ಉತ್ತರ:೧. ಲವ್ ಆಗುವಾಗ ಲಾ ಲಾ ಲಾಂತ, ನಂತರ ಲಾಲೀ ಲಾಲೀಂತ, ತದನಂತರ ಲವ ಲವಾಂತ.
           ೨. ಲಾಲಿ ಲಾಲೀಂತ, ನಂತರ  ಲವ ಲವಾಂತ. 
ಒಂದನೆಯದಲ್ಲಿ ಒಂದಾದರೂ extra point ಇದೆಯಲ್ಲ.  ಶುಭಸ್ಯ ಶೀಘ್ರಮ್.

೭. ..........., ಚನ್ನರಾಯಪಟ್ಟಣ 
ಪ್ರಶ್ನೆ   :ಗೌಡ್ರ ಗದ್ದ್ಲ ಕಮ್ಮಿ ಆಗಿಲ್ಲವಲ್ಲ?
ಉತ್ತರ:ಸುಮ್ಕೆ ಶಿವ್ ಶಿವಾಂತ ದಿನ ಎಣಸೋದು ಬಿಟ್ಟು ಶಿವ್ ಕುಮಾರ್ ನ  ಬೇಡ್ತಿರ್ತಾರೆ.

೮. ಪುಟ್ಸಾಮಿ, ಹಿಂದಿನ ಹರದನ ಹಳ್ಳಿ
ಪ್ರಶ್ನೆ    :ಗೌಡರ ಹಿಂದಿ ಹೇಗೆ?
ಉತ್ತರ:ಹಿಂದಿ (ಮೆ) ಕಹಿಯೇ

೯. ಕಪಿಲ, ಕುರಿಯೂರು 
ಪ್ರಶ್ನೆ    :ಕೈ ಗೆ ಓಟು ಹಾಕುತ್ತೀರಾ?
ಉತ್ತರ:೫೦೦ದ ನೋಟ್ ೫ ನ ಪ್ಯಾಕೆಟ್ನಲ್ಲಿ ಇಟ್ಟು ಅದ್ರ್ ವಟ್ಗೆ ಒಂದ್ ಹತ್ ಪ್ಯಾಕೆಟ್ ಕುಡಿಯಕ್ ಕೊಟ್ರೆ ಖಂಡಿತಾ  ಕಣ್ ರಪ್ಪೋ.

೧೦. ಸುಧಾ, ಬೆಂಗಳೂರು 
ಪ್ರಶ್ನೆ   :ವೃಶ್ಚಿಕ ರವರನ್ನು ನಿಮ್ಮ ಜಾಗಕ್ಕೆ ತಂದ್ರೆ?
ಉತ್ತರ:ನಾನು ಸುಲಭದಲ್ಲಿ ಸುಧಾಳನ್ನು ಸೇರುವೆ.

೧೧. ಗುಲ್ವಾಡಿ, ಮಂಗಳೂರು 
ಪ್ರಶ್ನೆ   :ತರಂಗದ ಅಂತರಂಗವೇನು?
ಉತ್ತರ:ತಲತಲಾಂತರದಿಂದ ತೇಲಾಡುತ್ತಿದ್ದ ಸುಮಧುರ ಸುಧೆಗೆ ಸರಿಸಾಟಿ ಯಾಗಿದ್ದು.

೧೨. ಲಂಕೇಶ್, ಬೆಂಗಳೂರು 
ಪ್ರಶ್ನೆ   :ನೀವು ತುಂಬಾ ತುಂಟತನದಿಂದ ಉತ್ತರ ಬರೆಯುತ್ತಿಲ್ಲವಲ್ಲಾ?
ಉತ್ತರ:ತುಂಟಿಯ ತರಹದುತ್ತರ ತರವಲ್ಲ ತಮ್ಮಾ.

೧೩. ಕುಮುದಾ, ಮಂಗಳೂರು 
ಪ್ರಶ್ನೆ   :ಜಹಾಂಗೀರ್ ಹೇಗೆ?
ಉತ್ತರ:ಕೋಮಲ್ ಅಥವಾ ತಾಜ್ ನಲ್ಲಿ ವಿಚಾರಿಸಿ 

೧೪. ಶಾಸ್ತ್ರಿ, ಕೋಗಿನೆಲೆ/ಕಾಗಿನೆಲೆ 
ಪ್ರಶ್ನೆ :ಶಾಸ್ತ್ರೀಯ ಸಂಗೀತಗಾಯಕರು ಎಲ್ಲಾ ಪಾಪ್ ಗಾಯಾಕರನ್ನು ಹೀಯಾಳಿಸುತ್ತಾರರಲ್ಲ? ಏಕೆ ಮತ್ತು ಕಾರಣ?
ಉತ್ತರ:ಹೊಟ್ಟೆಕಿಚ್ಚು ಅಷ್ಟೇ. ಸಂಕ್ಷಿಪ್ತವಾಗಿ - ಸಕಲ ಸರ್ವ ಸಂಗೀತದಾಧಾರ ಸ್ವರ.  ಪಾಪ, ಪಾಪ್ ಕೂಡ ಪಾಪದ್ದಲ್ಲ.

೧೫. ಇಂದಿರಾ, ಇಂಡಿಯಾ 
ಪ್ರಶ್ನೆ   :ಪೇಸ್ ಭೂಪತಿ ಟೆನ್ನಿಸ್ ಜೋಡಿ ಇಡಿಯಾಗಿ ನಂತರ ಬಿಡಿಯಾಗಿ ಮತ್ತೆ ಇಡಿಯಾಗಿ ಇನ್ನೊಮ್ಮೆ ಬಿಡಿಯಾಗಿದೆಯಲ್ಲ?
ಉತ್ತರ:ನಂಬರ್ ಒನ್ ಇದ್ದಾಗಲೇ ಇಬ್ಬರೂ 'ನೋ ಟೂ ಬಟ್ ಒನ್' ಎಂದು ಕಚ್ಚಾಡಿದ್ದರ ಫಲ -  ನೌ ನೋ ಒನ್ ನೋಮೋರ್ ಕೇರ್ಸ್ ದೀಸ್ ಟು, ಯು ನೊ.  

೧೬. ನರಸಿಂಹ, ನಾರಾಯಣಪುರ 

ಪ್ರಶ್ನೆ   :ಜಪಾನೀ ಹುಡುಗಿಯೊಬ್ಬಳು ಸಿಕ್ಕಿದ್ದಾಳೆ. ನನ್ನನ್ನು ಏನೆಂದು ಕರೆಯಲು ಹೇಳಲಿ?
ಉತ್ತರ:ಈಗಾಗಲೇ ಅವಳು 'ಸಾಯೋನಾರ' ಹೇಳಿದ್ದು ನಿಮಗೆ 'ಸಾಯೋ ನರ' ಎಂದೂ ಕೇಳಿಸಿರಬಹುದು.

೧೭. ಮಾರುತಿ, ಕನ್ಯಾಕುಮಾರಿ 
ಪ್ರಶ್ನೆ    :Match Fixing ಯಾರು ನಡೆಸುತ್ತಾರೆ?  
ಉತ್ತರ:ಕನ್ಯೆಯೇನಾದರೂ ಕನ್ಯಾಕುಮಾರಿಯಲ್ಲಿ fix ಆಗದಿದ್ದರೆ ಮಾರುತಿ ಯವರು matrimonial column ನೋಡಬಹುದಲ್ವಾ.

೧೮. ಮುದ್ದಣ್ಣ, ಗುಳೇದ್ ಗುಡ್ಡ 
ಪ್ರಶ್ನೆ   :ಮುದ್ದೆಗೆ ಸಾರೇ ಏಕೆ ಸಾಥೀ?
ಉತ್ತರ:ಗಡದ್ದಾಗಿ ತಿನ್ನುತ್ತಾ ಗುಳುಂ ಅನ್ನುವಾಗ ಗಂಟಲಲ್ಲಿ  ಮುದ್ದೆಗಂಟು ಗಟ್ಟಿಯಾಗಿ ಸಿಲುಕಿದಾಗ ಗುಟುಕರಿಸಲು ಸಾರೇ ಸಾಥೀ.

೧೯. ಸಾಂಗ್ಲಿಯಾನ, ಬೆಂಗಳೂರು 
ಪ್ರಶ್ನೆ   :ನೀವು ಕೃತಿ ಚೋರರಂತೆ?
ಉತ್ತರ:ದಯವಿಟ್ಟು ನಿಮ್ಮ ಫೋನ್ ನಂಬರ್ ಕೊಡಿ ಸಾರ್,  ಖುದ್ದಾಗಿ ಸೆಟ್ಟಲ್ ಮಾಡಿಕೊಳ್ಳೋಣ. 

೨೦. ಸುಬ್ರಹ್ಮಣ್ಯ ಸ್ವಾಮಿ, ಚೆನ್ನೈ 
ಪ್ರಶ್ನೆ :ಮುಂದೆ ನಗುತ್ತಾ ಹಿಂದಿನಿಂದ ಚೂರಿ ಹಾಕಬೇಕೆಂದಿದ್ದೇನೆ.  ನಿಮ್ಮ ಆಶೀರ್ವಾದವಿದೆಯೇ?
ಉತ್ತರ:ಮೊದಲು ಯಾರಿಗೆ ಹೇಳಿ ಪ್ಲೀಸ್. 

೨೧. ಹರಿಹರಕುಮಾರ, ಪಟ್ಣಮ್ 
ಪ್ರಶ್ನೆ :ಜೀವನದಲ್ಲಿ ಜಿಗುಪ್ಸೆ ಬಂದಿದೆ. ಏನು ಮಾಡಲಿ?  ಎರಡಾದರೂ ಸಲಹೆಗಳನ್ನು ಕೊಡಿರಿ 
ಉತ್ತರ:೧. ಅರ್ಧಂಗಿಯಿಂದ ಪೂರ್ತಿ ಧೈರ್ಯ ಪಡೆಯಿರಿ 
        ೨. ಪಟ್ಟಣದ ಭಾವಿ ಕೆರೆಗಳಲ್ಲಿ ನೀರಿಲ್ಲ , ಮಳೆಗಾಲ ಬರುವವರೆಗೂ ಸ್ವಲ್ಪ ಕಾಯಿರಿ.

೨೨. Mrs. ರಾಮೇಶ್ವರಿ, ರಿಷಿಕೇಶ 
ಪ್ರಶ್ನೆ :ನನ್ನ ಮುಂದಿನ ಬಾಳಿನ ಆಶೆ ಆಕಾಂಕ್ಷೆಗಳು ಎನಿರಬೇಕು? Please be serious 
ಉತ್ತರ:ಮುಂದೆ ಬಾಳಿನಾಸರೆಯಾಗುವವರು ಎಂದು ತಿಳಿಯದೆ ಮತ್ತು   ಯಾವ ಅಪೇಕ್ಷಗಳಿಲ್ಲದಯೇ,  ಮಕ್ಕಳ ಆಕಾಂಕ್ಷೆಗಳನ್ನು ಕರ್ತವ್ಯವೆಂದು ತಿಳಿದು ಪೂರೈಸಿರಿ.  

೨೩. ತಮ್ಮಣ್ಣ, ತಾವರೇಕೆರೆ 
ಪ್ರಶ್ನೆ   :ತಂದೆ, ತಾಯಿ, ಅಣ್ಣ - ಯಾರು ಹಿತವರು ಈ ಮೂವರೊಳಗೆ?
ಉತ್ತರ:ಹಿರಿಯರ ಹಿರಿತನ ಹೀಯಾಳಿಸಬೇಡಿ.  

೨೪. ಮುಶ್ ಬುಷ್, ಲಂಡನ್ 
ಪ್ರಶ್ನೆ   :ನೀವು ಲೆಡನ್ ವಾದಿಗಳೇ, ಸದ್ದಾಂ ವಾದಿಗಳೇ? 
ಉತ್ತರ:ಸೌದಿಯಲ್ಲಿದ್ದರೆ ಲೆಡನ್ ವಾದಿ, ಇರಾಕ್ ನಲ್ಲಿ ಇದ್ದರೆ ಸದ್ದಾಂ ವಾದಿ, ಪಾಕಿಸ್ತಾನ್ ದಲ್ಲಿದ್ದರೆ ಬುಷ್ ವಾದಿ ಮತ್ತು ಇವರಿಬ್ಬರ ಎದುರುವಾದಿ, ಭಾರತದಲ್ಲಿದ್ದರೆ ಬರೀ ವಾದಿ.

೨೫. ಮೀನ, ಮಲ್ಪೆ & ದೀನ ವಕೀಲ್, times towers, ಮುಂಬೈ 
ಪ್ರಶ್ನೆ  :Petervidal ರವರ ತಾರಾ ಭವಿಷ್ಯವಾಣಿ Bejan Daroovala ರವರಿಗಿಂತ ಹೆಚ್ಚು ನಿಜವಾಗಲು ಕಾರಣವೇನಿರಬಹುದು? 
ಉತ್ತರ:Vidal ರವರ ಭವಿಷ್ಯವಾಣಿ dull ಆಗಿರದೆ widely accepted ಆಗಿರುತ್ತದೆ.  ಬರೀ ತಾರೆಗಳ ತಾರಾಬಾಲದಲ್ಲೇ ಬೆಜ್ಜಾನ್ ದಾರು ಕುಡಿದು VJ, DJ ಎಂತೆಲ್ಲ ಯೋಚಿಸುವವರು ನಮ್ಮ ಗ್ರಹಗತಿಗಳ ಬಗ್ಗೆ ಏನು ಯೋಚಿಸಿಯಾರು.  

೨೬. ನೆಲ್ son, ಪಣಜಿ 
ಪ್ರಶ್ನೆ   :ನೀವು ಇಂಗ್ಲಿಷ್ ಶಬ್ದಗಳ್ಳನ್ನೇಕೆ ಹೆಚ್ಚಾಗಿ ಉಪಯೋಗಿಸುತ್ತೀರಾ?
ಉತ್ತರ:ತೀರ್ಥರೂಪ daddy ಪ್ರಭಾವ. 

೨೭. ಗುಲಾಂ ಅಲಿ, ಗುಲ್ಬರ್ಗ 
ಪ್ರಶ್ನೆ  :'ಏನ್ರೀ ನಿಮಗೆ ಸ್ವಲ್ಪವಾದರೂ ಬುದ್ದಿ ಇದೆಯಾ' ಅಂತ ಹೀಯಾಳಿಸ್ತಳಲ್ಲ ನನ್ನವಳು?
ಉತ್ತರ:ಸರಿಯಾಗಿಯೇ ಇದೆಯಲ್ಲ, ಗುಲಾಂ ರವರೇ. 

೨೮. ಹೆಸರುಬೇಡಾ, ವಯಸ್ಸು ೪೮ 
ಪ್ರಶ್ನೆ   :'V R ಎಸ್' ಗೆ ಎಸ್ ಎನ್ನಬೇಕೆಂದಿದ್ದೇನೆ.  ನನಗೆ ಸಿಗಬಹುದೇ?
ಉತ್ತರ:'U R ಟೂ ಮಚ್', ಎನ್ನುತ್ತಾರೆ  ನಿಮ್ಮ ವಯಸ್ಸು ನೋಡಿದ ಮ್ಯಾನೇಗೆಮೆಂಟ್.  ನಿಮ್ಮ ಪರ ತೀರ್ಪಿಗಾಗಿ ತೀವ್ರ ವಾಗಿ ತಿರು ರಾಮಚಂದ್ರನಲ್ಲಿ ಮೊರೆ ಹೋಗಿ.

೨೯. ಮಂಗಲದಾಸ್, ಮುಂಬಯಿ 
ಪ್ರಶ್ನೆ   :'ರಾಮ್ ಕೆ ನಾಮ್ ದೇ ದೇ ಅಲ್ಲಾ ಕೆ ನಾಮ್ ದೇ ದೇ' ಎಂದು ಇಲ್ಲೊಬ್ಬ ಭಿಕ್ಷೆ ಬಿಡುತ್ತಾನೆ. ತಪ್ಪಲ್ಲವೇ ?
ಉತ್ತರ:ಯಾರ ಹೆಸರೂ ಹೇಳದಯೇ ಮುಂಬಯಿಯಲ್ಲಿ ದೇದೇ  ದೇದೇ  ಎಂದು ಭಿಕ್ಷೆ ಬಿಡಬಹುದು - ಪೇದೆ ಬರುವ ತನಕ.

೩೦. ಸಾಹಿತ್ಯ ಪ್ರೇಮಿ, ಬೆಂಗಳೂರು 
ಪ್ರಶ್ನೆ : ಇಂದಿನ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿರುವುದು ಆತಂಕಕಾರಿಯಲ್ಲವೇ ?
ಉತ್ತರ:ಆತಂಕಕಾರಿಯಾದ ಆತಂಕವಾದಿಯ ಕಡೆ ಆಸಕ್ತಿ ವಹಿಸದಿದ್ದರೆ ಸಧ್ಯ ಸಾಕು. 

೩೧. ಹರಿದಾಸ, ಉಡುಪಿ 
ಪ್ರಶ್ನೆ   : 'ನಿಂತಲ್ಲೇ ನಿರ್ವಾಣ' ಎಂದು ಘೋಷಿಸಿ ಇಲ್ಲೊಬ್ಬ  ಬಾಬಾ ರಾತ್ರೋರಾತ್ರಿ ಪ್ರಸಿದ್ಧರಾಗಿದ್ದಾರೆ. ಜನ ಮುತ್ತಿಕೊಳ್ಳುತ್ತಿದ್ದಾರೆ, ನಾನೂ ನುಗ್ಗಲೇ ?
ಉತ್ತರ:ಹರಿದಾಸರನ್ನೂ ದಾಸ ಮಾಡಿಕೊಳ್ಳಲು 'ಬಾ, ಬಾ' ಎನ್ನುವ ಬಾಬಾಗಳು ಬೇಕಾದಷ್ಟಿದ್ದಾರೆ. ಬಾಬಾರನ್ನು ಬೇಗ ಬಿಡಿ, ನಿಮ್ಮೂರಿನ ಕೃಷ್ಣನನ್ನು ಕಾಣಿರಿ.

೩೨. ಕೋಮಲ, ಮದ್ದೂರು 
ಪ್ರಶ್ನೆ   :ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ, ಅತ್ತೆ ಸೊಸೆಯರ ಜಗಳ?
ಉತ್ತರ:ಮಗ ಕುಡಿಯಲು ಪ್ರಾರಂಭಿಸಿವ ತನಕ 

೩೪. ಗಾನಲೋಲ, ಮೈಸೂರು 
ಪ್ರಶ್ನೆ   : ನಿಮಗೆ ಪ್ರಿಯವಾದ ರಾಗ ಯಾವುದು ?
ಉತ್ತರ:ಗಾನಲೋಕದಲ್ಲಿ ಗಾನಲೋಲಳ ಅನುರಾಗ ಸಿಗುವಂಥಹ ಪ್ರೇಮರಾಗ 

೩೫. ಸತೀಶ, ಹಾಸನ 
ಪ್ರಶ್ನೆ   : ಭಾರತವನ್ನು 'ಮಲಗಿರುವ ಹುಲಿ' ಎಂದು ಪಾಶ್ಚ್ಯಾತ್ಯ ಅರ್ಥ ಶಾಸ್ತ್ರಜ್ಞರು ಗೌರವಿಸುತ್ತಾರಂತೆ. ಈ ಹುಲಿ ಏಳುವುದು ಯಾವಾಗ ?
ಉತ್ತರ:ಎದ್ದಿರುವ ಹುಲಿಗಳೆಲ್ಲ ಭಾರತವನ್ನು ಬಿಟ್ಟಲಗಿ ಅಮೆರಿಕಾದ ಸಿಲಿಕಾನ್ ಸೇರಿರುವಾಗ ಆ ದಿನ ಕಾಣುವುದು ಕಷ್ಟ. ಸಿಲಿಕಾನ್ ನಲ್ಲಿರುವ ಹುಲಿಗಳನ್ನು ವಾಪಸ್ಸು ಕರೆಸಲು ಆಲ್ಕೈದಾ ಕಳಿಸಿ ಕೂಡಲೇ.  

೩೬. ಹೆಸರು ಬೇಡ, ಊರು ಬೇಡ
ಪ್ರಶ್ನೆ   : ಇತ್ತೀಚೆಗೆ ನಿಮ್ಮ ಉತ್ತರಗಳು ಅಸಂಬದ್ಧ, ಅಸ್ಪಷ್ಟ ಮತ್ತು ರಸಹೀನವಾಗುತ್ತಿವೆ ಎಂಬುವುದು ನನ್ನ ಅನಿಸಿಕೆ ?
ಉತ್ತರ:ನನ್ನ ಕೆಲಸಕ್ಕೆ ಕೊಕ್ ಕೊಟ್ಟು ನನ್ನ ಕೀಮತ್ ಗೆ ಕಳಂಕ ಕೊಡುವ ಪ್ರಶ್ನೆ ಇಲ್ಲಿಗೆ ಯಾರಪ್ಪ ಕಳಿಸಿದ್ದು?


೩೭. ಪ್ರಜ್ಞಾ, ದೆಹಲಿ 
ಪ್ರಶ್ನೆ   :ಸಮಯ ಪ್ರಜ್ಞೆ ಎಂದರೇನು?
ಉತ್ತರ:Sorry, ಟೈಮಾಯ್ತು 

ಬಹುಮಾನ:  ಈ ವಾರದ ಬಹುಮಾನ ಶ್ರೀ ಗುಲಾಂ ರವರ ಪತ್ನಿಯವರಿಗೆ 

ವಿ.ಸೂ: ಪ್ರಶ್ನೆ ಉತ್ತರಗಳೇನೋ ಸಾಕಷ್ಟಿವೆ.  ಆದರೆ ಒಂದು ಲೇಖನದ ಸಂಭಾವನೆ ೧೦೦೦ ರೂ ಕ್ಕಿಂತ ಹೆಚ್ಚು ಕೊಡುವುದಿಲ್ಲವೆಂದು.  ಆದ್ದರಿಂದ ಇಲ್ಲಿಗೇ ಮುಕ್ತಾಯ ಮಾಡೋಣವೇ.  ಮತ್ತೇ... ಮತ್ತೂ.. ಮತ್ತುಬರಿಸುವಂತಹದುವುಗಳು ಮತ್ತೂ ಬೇಕೆನಿಸಿದರೆ, ನನಗೆ something more ಕೊಡಲೇಬೇಕೆಂದು ಕೂಡಲೇ some more ಕೊಡುವ ಸಂಪಾದಕರನ್ನು more sum ಗಾಗಿ  ಸಂಪರ್ಕಿಸಿ. 
end- ನಡೆದದ್ದು ಅಲ್ಲ imagination written sometime ಇನ್ 2002 

.
back to  

end.

.