Tuesday 1 December 2020

ಸ್ಮಾರ್ಟ್ ನೆಸ್ ನ ಗುಟ್ಟು smartness na guttu


Imaginative story

ಖರ್ಚು ಕಡಿಮೆ ಮಾಡುವ ಕಾರಣದಿಂದ ನಮ್ಮ ಊರಿನ ಕಛೇರಿಯನ್ನು ಮಂಗಳೂರಿನ ಕಛೇರಿಯ ಜೊತೆಗೆ ವಿಲೀನಗೊಳಿಸಿದಾಗ ನನಗೂ ಸ್ಥಾನ ಪಲ್ಲಟವಾಯಿತು.  ಹೊಸ ಜಾಗದಲ್ಲಿ ನನ್ನ ಹೊಸ ಸಹೋದ್ಯೋಗಿಗಳಾದ ಶ್ರೀ ಜಗನ್ನಾಥ್, ಶ್ರೀ ನಂಬಿಯಾರ್ ಮತ್ತು ಶ್ರೀ ಸುಬ್ಬರಾವ್ ಜೊತೆಗೆ ಮಧ್ಯಾಹ್ನದ ಊಟವನ್ನು ಪ್ರಾರಂಭಿಸಿದೆನು.   ಸ್ನೇಹ ಹಾಳಾಗುವುದೆಂಬ ಹೆದರಿಕೆಯಿಂದ ಮನಸ್ಸಿಲ್ಲದಿದ್ದರೂ ಒಟ್ಟಿಗೇ ಅವರ ಮಾತುಗಳನ್ನು ಕೇಳುತ್ತಾ ಊಟ ಮಾಡುವುದು ಅನಿವಾರ್ಯವಾಗಿತ್ತು.

ಶಿವಮೊಗ್ಗದವಳಾದ ನನ್ನವಳು ರುಚಿಯಾದ ಅಡಿಗೆ ತಯಾರಿಸುವುದಲ್ಲಿ ಎತ್ತಿದ ಕೈ.  ಹಾಗಾಗಿ ನನ್ನ ಸಹದ್ಯೋಗಿಗಳೆಲ್ಲರೂ ನಾನು ತರುತ್ತಿದ್ದ ಸೂಪರ್ ಸಾಂಬಾರ್ ಮೇಲೆಯೇ ಕಣ್ಣು ಇಟ್ಟಿದ್ದರು.   ಅಡುಗೆಗೆ ಕೊಬ್ಬರಿ ಎಣ್ಣೆ ಉಪಯೋಗಿಸಿದ ಪದಾರ್ಥಗಳನ್ನು ನಾನು ಇಷ್ಟಪಡದೆ ಇರುವುದರಿಂದ ನನ್ನ ಸಹದ್ಯೋಗಿಗಳು ತರುತ್ತಿದ್ದ ಸಾಂಬಾರ್ ಅಥವಾ ಪಲ್ಯವನ್ನು ಎಷ್ಟು ಬಲವಂತದಿಂದ ಕೊಡಲು ಬಂದರೂ ನಾನು ತೆಗೆದುಕೊಳ್ಳುತ್ತಿರಲಿಲ್ಲ.

ಆದರೂ ಇವರ ಜೊತೆಗೆ ಊಟ ಮಾಡುವುದರಲ್ಲಿ ನನ್ನ ಒಂದೇ ಒಂದು ಸ್ವಾರ್ಥವಿತ್ತು.  ನನ್ನೆಷ್ಟೇ ವಯಸ್ಸಿನವರಾದ ಈ ನನ್ನ ಮೂರು ಸಹದ್ಯೋಗಿಗಳು ಮೊದಲು ನನ್ನಂತೆಯೇ ಇದ್ದು ಈ ಐದಾರು ತಿಂಗಳಲ್ಲಿ ಸುಮಾರು ಹನ್ನೆರದರಿಂದ ಹದಿನೈದು ಕೆಜಿ ತೂಕ ಇಳಿಸಿ smart ಆಗಿಬಿಟ್ಟಿದ್ದರು.  ಇವರ ಗುಟ್ಟನ್ನು ತಿಳಿದುಕೊಳ್ಳಲು ಊಟದ ಸಮಯವೇ ಪ್ರಶಸ್ತ ಎಂದೆನಿಸಿತೆನೆಗೆ.

"ಇವರು ಏನು ಊಟ ತರುತ್ತಾರೆ, ಎಣ್ಣೆ ಜಾಸ್ತಿ ಉಪಯೋಗಿಸಿದ ಪದಾರ್ಥಗಳನ್ನು ವಾರದಲ್ಲಿ ಎಷ್ಟು ದಿನ, ಎಷ್ಟು ಸಲ ತೆಗೆದುಕೊಳ್ಳುತ್ತಾರೆ, ತುಪ್ಪ ದಿನವೂ ತಿನ್ನುತ್ತಾರೋ ಹೇಗೆ, ಬೆಳಿಗ್ಗೆಯಿಂದ ಉಪಹಾರ ಏನಿತ್ತು, ಸಂಜೆಯ ಹೊತ್ತಿನಲ್ಲಿ ಮುರುಕು ತಿನಸುಗಳನ್ನು (ಚಕ್ಕುಲಿ, ಕೊಡುಬೋಳೆ ಇತ್ಯಾದಿ) ತಿನ್ನದೇ ಟೀ ಕುಡಿಯುತ್ತಾರೋ, ದಿನದಲ್ಲಿ ಎಷ್ಟು ಬಾರಿ ಕಾಫಿ ಕುಡಿಯುತ್ತಾರೆ, ಟೀ ಏಕೆ ಕೇವಲ ಸಂಜೆಯ ಸಮಯದಲ್ಲಿ ಮಾತ್ರ ಕುಡಿಯುತ್ತಾರೆ, ಹಾಲು ಉಳಿಸಲೋ ಅಥವಾ ಇದು ಇವರ ಆರೋಗ್ಯದ ಗುಟ್ಟೋ, ಮನೆಯವಳ ಜೊತೆಗೆ ಹೊರಗೆ ಹೋಗುವಾಗ ಹೋಟೆಲಿಗೆ ವಾರದಲ್ಲಿ ಎಷ್ಟು ಸಲ ಹೋಗುತ್ತಾರೆ, ಹೋದಾಗ ಉತ್ತರ ಭಾರತದ ಊಟ ಅಥವಾ ತಿನಸುಗಳನ್ನು ಎಷ್ಟು ಬಾರಿ ಮಾಡುತ್ತಾರೆ, ಊಟದ ನಂತರ ಐಸ್ ಕ್ರೀಮ್ ಮತ್ತು ಫ್ರೂಟ್ ಸಲಾಡ್ ಕೇವಲ ಮಕ್ಕಳಿಗೆ ಕೊಡಿಸುತ್ತಾರೋ ಇಲ್ಲಾ ಇವರೂ ತಿನ್ನುತ್ತಾರೋ, ಮತ್ತೇ.. ಮನೆಯಲ್ಲಿ ಹೇಳದೆ ಹೊರಗಡೆ ಏನೇನು ತಿನ್ನುತ್ತಾರೆ, ತಿಂದಮೇಲೆ ಮತ್ತೇ ಮನೆಯಲ್ಲಿ ಏನೂ ಬಾಯಿಬಿಡದೆ ಊಟ ಮಾಡುತ್ತಾರೋ ಅಥವಾ ಹೊಟ್ಟೆ ನೋವು, ಇತ್ಯಾದಿ ಸುಳ್ಳು ಹೇಳುತ್ತಾರೋ..... " ಮುಂತಾದ ವಿಷಯಗಳನ್ನೆಲ್ಲ ಕೂಲಂಕುಷವಾಗಿ ಗಮನಿಸಿ, ಇವರನ್ನನುಸರಿಸಿ ಇವರಂತಯೇ ನಾನೂ ಸ್ಮಾರ್ಟ್ ಆಗಬೇಕೆಂಬ ಬಯಕೆ ನನ್ನ ಮನದಲ್ಲಿ ಕಾಡುತ್ತಿತ್ತು.

ಈ ವಿಷಯಗಳೆಲ್ಲ ಏಕೆ ಬೇಕೆಂದರೆ ನಾನೋ ಹೊಟ್ಟೆಬಾಕ.  ನನ್ನ ಮದುವೆಗೆ ಹೆಣ್ಣನ್ನು ನೋಡಲು ಬೆಂಗಳೂರಿನಿಂದ ನನ್ನ ತಂದೆಯವರು ಕಾರು ಮಾಡಿಕೊಂಡು ಶಿವಮೊಗ್ಗಕ್ಕೆ ಕರೆದೊಯ್ದಾಗ ನನ್ನ ತಾಯಿಯ ಹತ್ತಿರ "ನನ್ನ ಶರತ್ತು ಒಂದೇ, ರುಚಿಯಾದ ಅಡುಗೆ ಮಾಡಲು ಹುಡುಗಿಗೆ ಬರಬೇಕು, ಸ್ವಲ್ಪ ಕಪ್ಪಿದ್ದರೂ ಪರವಾಗಿಲ್ಲ, ಕಡಿಮೆ ಓದಿದ್ದರೂ ಪರವಾಗಿಲ್ಲ, ಆದರೆ ಅಡುಗೆ ಕೆಲಸ ನನ್ನಿಂದ ಮಾತ್ರ ಮಾಡಲು ಆಗುವುದಿಲ್ಲ ಮತ್ತು ಬರುವುದೂ ಇಲ್ಲ, ಕಲಿಯಲೂ ಇಷ್ಟವಿಲ್ಲ" ಎಂತೆಲ್ಲ ವಿನಂತಿಸಿಕೊಂಡಿದ್ದೆನು.  ಇದಕ್ಕೆ ನನ್ನ ತಾಯಿಯವರು "ಹಾಗಾಗಿಯೇ ನಿನಗೆ ಬೆಂಗಳೂರು ಹುಡುಗಿ ಅಡ್ಜಸ್ಟ್ ಆಗುವುದು ಕಷ್ಟ ಎಂದು ಯೋಚಿಸಿಯೇ ಈ ಶಿವಮೊಗ್ಗದ ಹುಡುಗಿಯನ್ನು ನೋಡಲು ಹೋಗುತ್ತಿರುವುದು" ಎಂದು ಸಮಾಧಾನ ಪಡಿಸಿದ್ದರು.

ಮದುವೆಯ ಮುಂಚೆ ಕೇವಲ ೫೮ ಕೆಜಿ ತೂಕವಿದ್ದ ನಾನು ಇವಳ ಅಡುಗೆಯ ಪ್ರಭಾವದಿಂದ ಆರೇ ವರ್ಷದಲ್ಲಿ ೭೮ ಕೆಜಿಗೆ ಏರಿದ್ದೆ.  ನನ್ನ ಎತ್ತರಕ್ಕೆ ೬೮ ಕೆಜಿ ಮಾತ್ರ ತೂಕವಿರಬೇಕೆಂದು ಡಾಕ್ಟರ್ ಸಲಹೆ ಕೊಟ್ಟಿದ್ದರು.  ನಾನು ಈಗ ತುರ್ತಾಗಿ ೧೦ ಕೆಜಿ ತೂಕ ಕಡಿಮೆ ಮಾಡಿಕೊಳ್ಳುವ ಪರಿಸ್ಥಿತಿ ಬಂದೊದಗಿದ್ದರಿಂದ ನನ್ನ ಸಹದ್ಯೋಗಿಗಳ smartnessನ ಗುಟ್ಟು ಏನೆಂದು ನಾನು ತಿಳಿಯಲೇಬೇಕಿತ್ತು.

ನಾನು ಏನೆಲ್ಲ ಪ್ರಯತ್ನ ಮಾಡಿದರೂ ಗುಟ್ಟು ಗೊತ್ತಾಗಲೇ ಇಲ್ಲ.   ಮೊದಲೇ ಮೂವರೂ ಮಂಗಳೂರಿನವರು, ಮಾತಿನಲ್ಲಿ ಬಹಳ ಚುರುಕು.  ಏನಾದರೂ ನೆಪ ಹೇಳಿ ಮಾತು ಬೇರೆಡೆಗೆ ತಿರುಗಿಸಿ ವಿಷಯ ಮರೆಮಾಚುತ್ತಿದ್ದರು. 

ಕೊನೆಯ ಪ್ರಯತ್ನವೆಂದು  ನನ್ನವಳು ಮಾಡುತ್ತಿದ್ದ ಸ್ಪೆಷಲ್ ಸಾಂಬಾರ್ ತಯಾರಿಸುವುದು ಹೇಗೆಂದು ತಿಳಿಸಲು ಈ ಭಾನುವಾರ ನಿಮ್ಮ ಮನೆಗೆ ಬರುತ್ತೇವೆಂದು ಸಹದ್ಯೋಗಿಗಳಿಗೆ ಹೇಳಿದೆನು.  ನನ್ನಾಕೆಯ ಮುಖಾಂತರ ಸಹದ್ಯೋಗಿಗಳ ಪತ್ನಿಯರಿಂದ ಏನಾದರೂ ವಿಷಯ ಸಂಗ್ರಹಿಸಬಹುದೇ ಎನ್ನುವುದು ನನ್ನ ಒಳಗುಟ್ಟಾಗಿತ್ತು. 

ಆ ಭಾನುವಾರ ನಾವಿಬ್ಬರೂ ಶ್ರೀ ನಂಬಿಯಾರ್ ಮನೆಗೆ ಹೋದಾಗ ಉಳಿದ ಸಹದ್ಯೋಗಿಗಳೂ  ಪತ್ನಿ ಸಹಿತ ಆಗಲೇ
ಶ್ರೀ ನಂಬಿಯಾರ್ ಮನೆಯಲ್ಲಿ ಹಾಜರಿದ್ದರು.  ಶ್ರೀ ನಂಬಿಯಾರ್ ಪಕ್ಕದ ಮನೆಯೇ ಶ್ರೀ ಸುಬ್ಬರಾಯರ ಮನೆ ಮತ್ತು ಶ್ರೀ ಸುಬ್ಬರಾಯರ ಮನೆಯ ಮೇಲೆಯೇ ಶ್ರೀ ಜಗನ್ನಾಥ್ ರವರು ವಾಸವಾಗಿದ್ದ ವಿಷಯವೂ ನನಗೆ ಆಗಲೇ ತಿಳಿಯಿತು. 

ಬಹಳ ಹುರುಪಿನಿಂದಲೇ ಎಲ್ಲರೂ ಇವಳು ಹೇಳಿದ್ದೆಲ್ಲವನ್ನು ವಿವರವಾಗಿ  ಪುಸ್ತಕದಲ್ಲಿ ಬರೆದುಕೊಂಡರು.  ಲೋಕರೂಡಿ ಮಾತನಾಡುವಾಗ ಮೂರು ಶ್ರೀಮತಿಯರೂ ಹೊಸರುಚಿಯ ಬಗ್ಗೆ ಪ್ರತಿ ನಿಮಿಷಕ್ಕೊಮ್ಮೆ ಪ್ರಸ್ತಾಪ ಮಾಡುತ್ತಿದ್ದರು.  ಹಾಗೆಯೇ ಮೂವರೂ ಸುಮಾರು ಆರು ತಿಂಗಳುಗಳಿಂದ ಪ್ರತಿರಾತ್ರಿ ಏನಾದರೂ ಹೊಸ ಹೊಸ ತಿನಿಸುಗಳನ್ನು ತಯಾರಿಸಿ ಅದನ್ನೇ ಹಂಚಿಕೊಂಡು ತಿನ್ನುತ್ತಿದ್ದ (ರಾತ್ರಿ ಊಟದ ಬದಲಿಗೆ) ವಿಷಯ ಕೂಡ ತಿಳಿಯಿತು.

ಅಡುಗೆ ಕೋಣೆಗೆ ಸಾಂಬಾರ್ ತಯಾರಿಸಲು ಎಲ್ಲರೂ ಒಳಗೆ ಹೋದಾಗ ಅಲ್ಲಿಯೇ ಇದ್ದ ಮೂರು ನಾಲ್ಕು ಪುಸ್ತಕಗಳನ್ನು ತಿರುವಿ ಹಾಕಿದೆನು.  ಆಗ ಮನದಟ್ಟಾಗಿದ್ದು ನನ್ನ ಸಹದ್ಯೋಗಿಗಳ ಪತ್ನಿಯರು ಹೊಸರುಚಿ ಸ್ಪೆಶಾಲಿಸ್ಟ್ ಎಂದು.  ಪ್ರಾಯಶಃ ನನ್ನ ಸಹದ್ಯೋಗಿಗಳು ಆ ಹೊಸರುಚಿಗಳನ್ನು ಆರು ತಿಂಗಳುಗಳಿಂದ ಸವಿಯುತ್ತಿರುವ (ರಾತ್ರಿ ಊಟದ ಬದಲಿಗೆ) ಮೊದಲಿಗರು ಇರಬೇಕು (ಹಾಗೂ ಕೊನೆಯವರು?).  ಇವರ smartnessನ ಗುಟ್ಟು ಕೊನೆಗೂ ರಟ್ಟಾಯಿತು.
end- ನಡೆದದ್ದು ಅಲ್ಲ imagination written sometime ಇನ್ 2002

.
back to  

end.

.

No comments:

Post a Comment