Showing posts with label ಕಥೆ या ಹರಟೆ-ಸೌಂದರ್ಯ soundarya. Show all posts
Showing posts with label ಕಥೆ या ಹರಟೆ-ಸೌಂದರ್ಯ soundarya. Show all posts

Tuesday, 1 December 2020

ಸೌಂದರ್ಯ soundarya



Imaginative story

 Imaginative story


ಸೌಂದರ್ಯ - ಕಥೆ 


ಎರಡನೆಯ ಪ್ರಿ-ಯೂನಿವರ್ಸಿಟಿಯಲ್ಲಿ ಶೇಖಡಾ 80 ರಷ್ಟು ಅಂಕಗಳನ್ನು ಗಳಿಸಿದ್ದರೂ ನಾನು ಇಂಜಿನೀರಿಂಗ್ ಗೆ ಸೇರಲು ನನ್ನ ಮನಸ್ಸು ಅಷ್ಟೇನು ಬಯಸಲಿಲ್ಲವಾದದ್ದರಿಂದ ನಾನು ಮೊದಲನೆಯ B.Sc ಗೆ ಸೇರಿದೆ. ನಮ್ಮ ತಂದೆಯವರ ಆರ್ಥಿಕ ದೃಷ್ಟಿಯಿಂದ ಹೊರೆಯಾಗಲು ನನ್ನ ಮನಸ್ಸು ಒಪ್ಪಲಿಲ್ಲವೆಂಬುದು ಮತ್ತೊಂದು ಕಾರಣವಾಗಿತ್ತು.  ಮೇಲಾಗಿ  B.Sc ಗೆ ಸೇರಿದರೆ ನನಗೆ ವಿದ್ಯಾರ್ಥಿವೇತನ ಸಿಗುವುದು ಖಂಡಿತವಾಗಿತ್ತು ಮತ್ತು ನನಗೆ ಅದರ ಅವಶ್ಯಕತೆಯೂ ಕೂಡ ಇತ್ತು. ನಾನು ವಿದ್ಯಾರ್ಥಿವೇತನ ಪಡೆದು M.Sc ಮುಗಿಸಿ NET ಪರೀಕ್ಷೆ ತೆಗೆದುಕೊಂಡು ಅಧ್ಯಾಪಕನಾಗಬೆಂಕೆಂಬ ಮನದಾಸೆ ನನ್ನನ್ನು ಕಾಡುತ್ತಿತ್ತು. ನನ್ನ ಅಣ್ಣ ಇಂಜಿನೀಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿ ಒಂದು ವರ್ಷ ಕಳೆದು ನನಗೆ ಆರ್ಥಿಕ ಸಹಾಯ ಮಾಡುವ ಪರಿಸ್ಥಿತಿಯಲ್ಲಿದ್ದರೂ ನನ್ನ ಸ್ವಾಭಿಮಾನದ ಕಾರಣದಿಂದ ಅವನ ಸಹಾಯ ತೆಗೆದುಕೊಳ್ಳಲು ನನ್ನ ಮನಸ್ಸು ಒಪ್ಪುತ್ತಿರಲಿಲ್ಲ.


ತರಗತಿಗಳು ಪ್ರಾರಂಭವಾಗಿ ಸುಮಾರು ನಾಲ್ಕೈದು ದಿನಗಳಾಗಿರಬಹುದು.  ತರಗತಿ ಇಲ್ಲದ ಸಮಯದಲ್ಲಿ ನನ್ನ ಆಪ್ತ ಸ್ನೇಹಿತರಿಬ್ಬರ ಜೊತೆಗೆ ಕಾಲೇಜಿನ ಮುಖ್ಯದ್ವಾರದ ಹೊರಗೆ ನಿಲ್ಲುತ್ತಿದ್ದೆವು. ಕಾಲೇಜಿಗೆ ಬರುವ ಎಲ್ಲಾ ಹುಡುಗಿಯರ ಮೇಲೆ ನಮ್ಮ ಕಣ್ಣುಗಳು ತಾನಾಗಿಯೇ ಕೇಂದ್ರೀಕೃತವಾಗುತ್ತಿದ್ದವು. ಕಾಲೇಜಿನ ಮುಖ್ಯ ಪ್ರಾಚಾರ್ಯರು, ಇತರ ಸಿಬ್ಬಂದಿ ವರ್ಗದವರು ಮತ್ತು ಮನೆಯ ಹಿರಿಯರ ಭಯದಿಂದ ಹುಡುಗಿಯರ ಮುಂದೆ ಯಾವ ಟೀಕೆಗಳನ್ನು ಮಾಡದೆ ಸಭ್ಯತೆ ತೋರಿದರೂ, ನಮ್ಮ ಯೋಚನೆಗಳೆಲ್ಲ ಯಾವುದಾದರೂ ಹುಡುಗಿಯ ಜೊತೆಗೆ ಯಾವಾಗ ಸ್ನೇಹವಾಗುತ್ತೇ ಎಂದಿತ್ತು.  


ನನ್ನ ಆಪ್ತ ಸ್ನೇಹಿತರಿಬ್ಬರ ಜೊತೆಗಿನ ಸ್ನೇಹ ಕೇವಲ ಕಾಲೇಜಿನ ಓದಿಗೆ ಸೀಮಿತವಾಗಿರದೆ ಒಬ್ಬರಿಗೊಬ್ಬರು ಧೈರ್ಯ ತುಂಬುವುದು, ಸಹಾಯ ಹಸ್ತ ಕೊಡುವುದು ಮುಂತಾದುವುಗಳಿಂದ ನಮ್ಮ ಸ್ನೇಹ ಅಚಲವಾಗಿ ಹಾಗೂ ನಿರ್ಮಲವಾಗಿ ಗಾಢವಾಗುತ್ತ ಹೋಗಿತ್ತು.  ಪ್ರಿ-ಯೂನಿವರ್ಸಿಟಿಯಲ್ಲಂತೂ ಯಾವುದೇ ಹುಡುಗಿಯ ಸ್ನೇಹ ಮಾಡಲಿಲ್ಲ, ಈ ವರ್ಷವಾದರೂ ಸ್ವಲ್ಪ ಸಾಧನೆ ಮಾಡಬೇಕೆಂಬ ನನ್ನ ಇಂಗಿತವನ್ನು ಸ್ನೇಹಿತರ ಮುಂದಿಟ್ಟೆ.  ಕೂಡಲೇ ಸ್ನೇಹಿತರಿಬ್ಬರೂ ಏನು ಸಹಾಯ ಬೇಕೆಂದರೂ ಮಾಡಲು ಸಿದ್ಧವೆಂದರು.  


ಮಾರನೆಯ ದಿನ ಶನಿವಾರ. ಬೆಳಿಗ್ಗೆ ತರಗತಿ ಪ್ರಾರಂಭವಾಗುವ ಮುಂಚೆ ಎಂದಿನಂತೆ ಕಾಲೇಜಿನ ಹೊರಗಡೆ ಹಾಗೆಯೇ ಹರಟೆ ಹೊಡೆಯುತ್ತ ನಿಂತಿದ್ದೆವು.  ಆಗ ಬಂದು ನಿಂತಂತಹ ರಿಕ್ಷಾ ನಮ್ಮೆಲ್ಲರ ಗಮನ ಆ ಕಡೆಗೆ ಸೆಳೆಯಿತು. ಸುಂದರ ಯುವತಿ ಆ ರಿಕ್ಷಾದಿಂದ ಒಬ್ಬ ಹಿರಿಯರ  ಜೊತೆಗೆ ಕೆಳಗಿಳಿಯುತ್ತಲೇ ನನ್ನ ಕಣ್ಣುಗಳು  ಅವಳನ್ನು ನೋಡಿ ನಾನು ಮನದಲ್ಲೇ ಸೃಷ್ಟಿಸಿ ಹೆಸರಿಸಿದ್ದ ಸೌಂದರ್ಯಳನ್ನು ಕಂಡಂತೆ ಭಾಸವಾಗಿ ನನ್ನ ಮನ ಮಿಡಿಯಿತು. ಸೌಂದರ್ಯಾಳ ತಂದೆಯವರು ನನ್ನ ನೋಡಿ ನಕ್ಕಾಗ ನನ್ನ ಸ್ನೇಹಿತರಿಬ್ಬರೂ ದಂಗಾದರು.  ಸೌಂದರ್ಯಳ ತಂದೆಯವರನ್ನು  ನನ್ನ ತಂದೆಯವರು ಮಾರುಕಟ್ಟೆಯಲ್ಲಿ ಸಿಕ್ಕಾಗ ಮಾತನಾಡಿಸಿದ ನೆನಪು ನಮ್ಮಿಬ್ಬರಿಗೂ ಇತ್ತು. ಇದೇ ಕಾರಣಕ್ಕೇ ಅವರು ನನ್ನನ್ನು ನೋಡಿ ಸ್ಪಂದಿಸಿದ್ದಾರೆ ಅಷ್ಟೇ.  ಸೌಂದರ್ಯಳ ತಂದೆಯವರಿಂದ ಆ ಯುವತಿ ಮೊದಲನೆಯ B.Sc ಗೆ ನನ್ನದೇ ವಿಷಯಗಳನ್ನು ತೆಗೆದುಕೊಂಡು ಸೇರಿದ್ದಾಳೆಂದು ತಿಳಿಯಿತು. ಅವರು ಆ ಯುವತಿಯನ್ನು ನನಗೆ ಪರಿಚಯಿಸಿದಾಗ ಅವಳ ಹೆಸರನ್ನು ನೆನಪಿಡಲು ಇಷ್ಟಪಡದೇ ನಾನವಳಿಗೆ ಸೌಂದರ್ಯವೆಂದು ನಾಮಕರಣ ಮಾಡಿದ್ದೆ.    'Welcome to my class, ಇನ್ನು ಹದಿನೈದು ನಿಮಿಷಗಳಲ್ಲಿ Physics lecture ಪ್ರಾರಂಭ' ಎಂದು ಸೌಂದರ್ಯಳಿಗೆ ನಾನು ಹೇಳಿದಾಗ ಅವರಿಬ್ಬರೂ ಪ್ರಿನ್ಸಿಪಾಲ್ ರನ್ನು ಭೇಟಿ ಮಾಡಲು ನನಗೆ ವಿದಾಯ ಹೇಳಿ ಹೊರಟರು.  


ನನ್ನನ್ನೇ ಗಮನಿಸಿದ ನನ್ನ ಆಪ್ತ ಸ್ನೇಹಿತರು 'ಏನಮ್ಮ ನಿನ್ನ ಅದೃಷ್ಟ ಖುಲಾಯಿಸಿತಲ್ಲ' ಎಂದಾಗ ನಾಚಿ ನೀರಾದೆ. ಸ್ನೇಹಿತರಿಬ್ಬರೂ 'ನಿನ್ನ ಕನಸು ನನಸಾಗುವ ಸಮಯ ಬಂದೇ ಬಿಟ್ಟಿತಲ್ಲ, ಮತ್ತೇ ನಿನಗೇನಾದರೂ ಸಹಾಯ ಬೇಕಾದರೂ ನಾವು ಸಿದ್ಧ' ಅಂದಾಗ ಸಧ್ಯ ಅವರಿಬ್ಬರೂ ಇವಳ ಹಿಂದೆ ಇಲ್ಲವಲ್ಲ ಎಂಬ ಸಂತೋಷವಾಯಿತೆನಗೆ.


ಅಂದು ದಿನದ ಯಾವ ಪಾಠವೂ ತಲೆಗೆ ಹೋಗದೆ ಕೊನೆಯ ಕ್ಲಾಸ್ ನಿಂದ ನನ್ನ ಸೌಂದರ್ಯ ಹೊರಗೆ ಬಂದಾಗ ಅವಳನ್ನು ಮಾತನಾಡಿಸಲು 'How do you feel about the class?' ಎಂದು ಕೇಳಿದೆ.  ಅವಳೇನೂ ಹೇಳಲು ಇಚ್ಚಿಸದೆ ಸುಮ್ಮನೆ ನಕ್ಕಳು.  'ನಿಮಗೆ notes ಬೇಕಿದ್ದರೆ ನಾನು ಕೊಡುವೆ'   ಎಂದಾಗ 'No thank you' ಎಂದು ಹೇಳಿದಾಗ ಏನೂ ಹೇಳಲು ತೋಚದೆ 'bye, see you on Monday' ಎಂದು ವಿದಾಯ ಹೇಳಿದೆ. 'yes' ಅಂದಿದ್ದರೆ ಹಾಗೇ ಮಾತು ಮುಂದುವರೆಯುತ್ತಿತ್ತೇನೋ.  


ನನ್ನ ಕ್ಲಾಸ್ಸಿನಲ್ಲಿ ಇರುವ ಇತರರು ಏನಪ್ಪಾ ಇವ್ನು ಆ ಹುಡುಗಿ ಬಂದ ಮೊದಲನೇ ದಿನಾನೇ line ಹೊಡೆಯಲು ಹೊರಟಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದಾಗ ನನ್ನ ಸ್ನೇಹಿತರಿಬ್ಬರೂ ಆ ಹುಡುಗಿ ಅವನಿಗೆ ದೂರದ ಸಂಬಂಧಿ ಎಂದು ಹೇಳಿದ್ದು ನನಗೆ ಕೇಳಿಸುತ್ತಿತ್ತು.  


ಮನೆಗೆ ಹೋಗಿ ಪುಸ್ತಕಗಳನ್ನು ಮೇಜಿನ ಮೇಲೆ ಬಿಸಾಡಿ, ಮುಖ ತೊಳೆದು, ತಿಂಡಿ ತಿಂದು, ಕಾಫಿ ಕುಡಿದು ಸಂಜೆ ಹಾಗೆಯೇ ತಿರುಗಾಡಲು ಹೊರಟೆ.  ಎಲ್ಲಿಗೆ ಹೋಗುತ್ತಿದ್ದೀನಿ ಎನ್ನುವ ಪರಿವೇ ಇಲ್ಲದೆ ಸುಮ್ಮನೆ ಒಬ್ಬನೇ ನಡೆಯುತ್ತಿದ್ದೆ. ಮನಸ್ಸಿನಲ್ಲಿ ಏನೋ ತಳಮಳ, ಏನೇನೋ ಯೋಚನೆಗಳು.  


ಸೋಮವಾರ ನಾನು ನನ್ನ ಸೌಂದರ್ಯಳನ್ನು ಹೇಗೆ ಭೇಟಿ ಮಾಡಬೇಕು, ಭೇಟಿಯ ಕಾರಣ ಏನಿರಬೇಕು, ಏನು ಹೇಳಬೇಕು ಅವಳಿಗೆ, ನಂತರದ ಭೇಟಿಗಳಿಗೆ ಏನೇನು ಮಾತನಾಡಬೇಕು, ಅದಕ್ಕವಳು ಏನು ಉತ್ತರಗಳನ್ನು ಕೊಡಬಹುದು, ಆ ಉತ್ತರಗಳಿಗೆ ನನ್ನ ಪ್ರತ್ಯುತ್ತರಗಳೇನಿರಬೇಕು, ಇಂದಿನ ತರಹ ಅರ್ಧ ನಿಮಿಷದಲ್ಲೇ ಮಾತು ಮುಗಿಸಲು ಬಿಡಬಾರದು, ಅವಳು ಪ್ರತಿನಿತ್ಯ ಸಂಜೆ ಯಾರ್ಯಾರ ಮನೆಗಳಿಗೆ ಹೋಗುತ್ತಾಳೆ, ಅವಳ ಮನೆ ನನ್ನ ಮನೆಯಿಂದ ಎಷ್ಟು ದೂರವಿರಬಹುದು, ನಾನು ಹೇಗೆ ಅವಳ ಮನೆಗೆ ಹೋಗಬಹುದು, ಅವಳ ಮನೆಗೆ ನನ್ನನ್ನು ಕರೆಯುವ ಹಾಗೆ ಏನನ್ನು ಮಾಡಬೇಕು, ಅವಳು ಪ್ರತಿ ಗುರುವಾರ ರಾಘವೇಂದ್ರ ಸ್ವಾಮಿಯ ಗುಡಿಗೆ, ಶನಿವಾರ ಮಾರುತಿ ಗುಡಿಗೆ  ಹೋಗುತ್ತಾಳೋ, ಹೋದರೆ ಯಾವ  ಜಾಗದಲ್ಲಿರುವ ಯಾವ ಗುಡಿಗೆ ಹೋಗುತ್ತಾಳೆ, ಎಷ್ಟು ಹೊತ್ತಿಗೆ ಹೋಗುತ್ತಾಳೆ, ಯಾರ ಜೊತೆಗೆ ಹೋಗುತ್ತಾಳೆ, ನಾನು ಅಲ್ಲಿಗೆ ಹೋಗಿ ಮಾತನಾಡಿಸಿದರೆ ಅವಳ ಜೊತೆಗಿರುವವರಿಂದ ಏನಾದರೂ ತೊಂದರೆಗಳು ಇವೆಯೇ, ಇವಳ ಸ್ನೇಹಿತೆಯರು ಯಾರ್ಯಾರು, ಇವಳು ಅವರ ಮನೆಗೆ ಹೋಗುತ್ತಾಳೋ ಅಥವಾ ಅವರೇ ಇವಳ ಮನೆಗೆ ಬರುತ್ತಾರೋ, ಯಾವ ಬಳೆ ಅಂಗಡಿ, ಯಾವ fancy shopಗೆ  ಹೋಗುತ್ತಾಳೆ, ಅವಳ ಆಸಕ್ತಿಗಳು ಏನೇನು, ಅವಳ ತಂದೆ ಹಾಗೂ ಅವಳ ತಾಯಿಯವರು ನಿಷ್ಕೃಷ್ಟ ಸ್ವಭಾವದವರೋ ಹೇಗೆ, ಅವಳ ತಂದೆಯವರು ನನಗೆ ಕಾಲೇಜಿನಲ್ಲಿ ಮಾತನಾಡಿಸಿದ ಬಗ್ಗೆ ನಮ್ಮ ತಂದೆಯವರಿಗೆ ಹೇಳಬೇಕೋ ಬೇಡವೋ, ಹೇಳಿದರೆ ಕೆಲಸ ಕೆಡುತ್ತದೆಯೋ ಅಥವಾ ಅನುಕೂಲವಾಗುತ್ತೋ, ನನ್ನ ಅಮ್ಮನಿಗೆ ಅವಳ ಅಮ್ಮನ ಪರಿಚಯವಿದೆಯೋ, ಏನು ಮಾಡಿದರೆ ಅವಳ ಜೊತೆ ನನ್ನ ಸ್ನೇಹವನ್ನು ಗಟ್ಟಿ ಮಾಡಿಕೊಳ್ಳಬಹುದು, ಏನೆಲ್ಲಾ  ಯೋಚನೆಗಳು ತಲೆಯಲ್ಲಿ ಹಾದುಹೋಗಿ ಎಲ್ಲಿಗೆ ನಡೆಯುತ್ತಿದ್ದೇನೆ ಎನ್ನುವ ಪರಿವೆ ಮೂಡಲಿಲ್ಲ. ಮನೆಗೆ ವಾಪಸ್ಸು ಬಂದಾಗ ಆಗಲೇ ರಾತ್ರಿ ಏಳೂಮುಕ್ಕಾಲು ಆಗಿತ್ತು. ಓದಲು ಮನಸ್ಸಿಲ್ಲ, ಊಟ ಕೂಡ ಸೇರುತ್ತಿಲ್ಲ, ಹಾಸಿಗೆಯ ಮೇಲೆ ಮಲಗಿ ನಿದ್ರಾದೇವಿಯ  ಆಹ್ವಾನಕ್ಕೆ ಹಾಗೇ ಹೊರಳಾಡುತ್ತಾ ಇದ್ದೆ. ಎಷ್ಟು ಹೊತ್ತಾದರೂ ನಿದ್ರೆ ಬರಲೇ ಇಲ್ಲ.  ಬರೀ ಯೋಚನೆ, ಹೀಗೆ ಮಾಡಬೇಕು, ಹಾಗೆ ಮಾಡಬೇಕು, ಹೀಗಾದರೆ ಹೇಗೆ, ಹಾಗಾದರೆ ಹೇಗೆ...  ಕೊನೆಗೂ ರಾತ್ರಿ ಮಂಪರು ಹತ್ತಿ ನಿದ್ರೆ ಬಂದದ್ದು ಗೊತ್ತಾಗಲಿಲ್ಲ.   


ನಮ್ಮ ಮನೆಯ ದೊಡ್ಡ ಗಡಿಯಾರ ಬೆಳಿಗ್ಗೆ ಎಂಟು ಹೊಡೆದಾಗ ನನಗೆ ಎಚ್ಚರ.  ಛಕ್ಕನೆ ಕಣ್ಣು ಬಿಟ್ಟೆ.  ಅಮ್ಮ ಎದುರಿಗೆ ನಿಂತು 'ಎಷ್ಟು ಸಲ ಎಬ್ಬಿಸಬೇಕು ನಿನ್ನನ್ನು, ಮೂವತ್ತು ನಿಮಿಷದಲ್ಲಿ ಹೊರಡಲು ತಯಾರಾಗು' ಎಂದು ಆಜ್ಞಾಪಿಸಿದಾಗ  ಏನೂ ಮಾತನಾಡದೆ ಬಚ್ಚಲು ಮನೆಗೆ ನಡೆದೆ. ಗಡಿಯಾರದ ಎಂಟರ ಮುಳ್ಳು ನನ್ನ ಹೃದಯ ಚುಚ್ಚಿ  ಪೆಟ್ಟು ಬಿದ್ದಂತೆ ಎಂದು ನನಗೆ ಆಗ ಮನವರಿಕೆಯಾಗಲಿಲ್ಲ.


ರಾಹುಕಾಲ ಸಾಯಂಕಾಲ 4.30 ರಿಂದ ಪ್ರಾರಂಭವೆಂದು ಬೆಳಿಗ್ಗೆಗೇ ಕಾರ್ಯಕ್ರಮವನ್ನು ಹಿಂದೂಡಿದ್ದರು.  ನನ್ನ ತಂದೆ, ತಾಯಿ, ಅಣ್ಣ ಮೂರೇ ಜನರಾಗುವುದರಿಂದ ಒಳ್ಳೆಯ ಕಾರ್ಯಕ್ಕೆ ನನ್ನನ್ನು ಕರೆದುಕೊಂಡು ಹೋಗಲು ನಿರ್ಧರಿಸಿದ್ದರು. ನನಗೆ ಮನಸ್ಸಿಲ್ಲದಿದ್ದರೂ ತಂದೆಯ ಮಾತುಗಳನ್ನು ಎದುರಿಸಲು ಮನಸ್ಸಿಲ್ಲದೆಯೇ ಸಿದ್ಧನಾದೆ. 


ಬೆಳಿಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ  taxi ಮನೆಯ ಮುಂದೆ ಬಂದು ನಿಂತಿತು. ಮನಸ್ಸಿನಲ್ಲಿ ಇನ್ನೂ ಸೌಂದರ್ಯಳ ನೆನಪೇ ಇದ್ದಿದ್ದರಿಂದ ಏನೂ ಮಾತನಾಡದೆ ಸುಮ್ಮನೆ ಎಲ್ಲರ ಜೊತೆಗೆ ಟ್ಯಾಕ್ಸಿಯಲ್ಲಿ ಕುಳಿತೆ.  ಐದೇ ನಿಮಿಷದಲ್ಲಿ ಟ್ಯಾಕ್ಸಿ ಇನ್ನೊಂದು ಮನೆಯ ಹೊರಗೆ ನಿಂತಿತ್ತು, ಹಾಗೆಯೇ ಆ ಮನೆಯ ಮುಂದೆ ನಮ್ಮ ಬರುವಿಕೆಗಾಗಿ ಕಾಯುವಂತೆ ಮನೆಯ ಯಜಮಾನಿಕೆ ನಿಂತಿದ್ದರು. ನಮ್ಮನ್ನು ಬನ್ನಿ ಒಳಗೆ ಎಂದೂ ಆಹ್ವಾನಿಸುತ್ತ ಮನೆಯ ಯಜಮಾನರನ್ನು ಕರೆದರು. ಮನೆಯ ಯಜಮಾನರು ಹೊರಗೆ ಬಂದಾಗ  ಅವರನ್ನು ನೋಡಿ ನನ್ನ ಮನಸ್ಸಿನಲ್ಲಿ ಆಘಾತವಾಗಿ ಸ್ಮೃತಿ ತಪ್ಪಿದವನ ಹಾಗೆ ಆಗಿತ್ತು. ಅವರು ಬೇರೆಯಾರಿಲ್ಲದೇ ಸೌಂದರ್ಯಳ ತಂದೆಯಾಗಿದ್ದರು.  


ನಮ್ಮನ್ನೆಲ್ಲ ಜಗುಲಿಯಿಂದ ಒಳಗೆ ಕರೆದುಕೊಂಡು ಹೋಗಿ sofaದ ಮೇಲೆ ಕುಳಿತುಕೊಳ್ಳಲು ಹೇಳಿದರು. ನಾನು ಅಲ್ಲಿದ್ದ ನೀರಿನ ಲೋಟವನ್ನು ಕೈಗೆತ್ತಿಕೊಂಡು ನೀರು ಕುಡಿಯುತ್ತಿರುವಾಗಲೇ ಸೌಂದರ್ಯಳ ತಂದೆಯವರು ನನ್ನ ತಂದೆಯವರಿಗೆ 'ನಿಮ್ಮ ಎರಡನೆಯ ಮಗನನ್ನು ನಿನ್ನೆಯೇ ಕಾಲೇಜಿನಲ್ಲಿ ಮಾತನಾಡಿಸಿದೆ, very good boy' ಎಂದು ಹೊಗಳಿಕೆಯ ಮಾತುಗಳನ್ನು ಆಡಿದರು.  ಸ್ವಲ್ಪ ಹೊತ್ತಿಗೆ ಸಜ್ಜಿಗೆ, ಉಪ್ಪಿಟ್ಟು ಬಂದಿತಾದರೂ ಏನೂ ತಿನ್ನಲು ಮನಸ್ಸಿಲ್ಲದೆಯೇ ತಲೆ ನೋವೆಂದು ಹೇಳಿ ಬಲವಂತದಿಂದ ಕಾಫಿ ಕುಡಿದೆ.  ಸೌಂದರ್ಯ ರೇಶಿಮೆ ಸೀರೆಯುಟ್ಟು ತಾಯಿಯ ಜೊತೆಗೆ ಒಳಗಿನಿಂದ ಬಂದು ತಲೆ ತಗ್ಗಿಸಿ ಕುಳಿತಾಗ ನಾನು ತಲೆಯೆತ್ತದೇ ಅಲ್ಲಿದ್ದ ವಾರ ಪತ್ರಿಕೆಯ ಮೇಲೆ ಸುಮ್ಮನೆ ಕಣ್ಣು ಹಾಯಿಸಿರುವಂತೆ ನಟಿಸುತ್ತಿದ್ದೆ.  


ಮನೆಯಿಂದ ಹೊರಗೆ ಮತ್ತೆ ಟ್ಯಾಕ್ಸಿಯಲ್ಲಿ ಕುಳಿತಾಗ ನನ್ನ ತಂದೆಯವರು ಮದುವೆ ಮಾಘ ಮಾಸದಲ್ಲಿ ಇಟ್ಟುಕೊಳ್ಳೋಣ ಎಂದಾಗ ನನ್ನ ತಾಯಿಯವರು ನಿಶ್ಚಿತಾರ್ಥ ಮಾತ್ರ ಕೂಡಲೇ ಮಾಡಿ ಮುಗಿಸೋಣ, ಏಕೆಂದರೆ ನಂತರ ಹುಡುಗ ಹುಡುಗಿ ಇಬ್ಬರೂ ಎಲ್ಲಿ ಬೇಕಾದರೂ ತಿರುಗಾಡಬಹುದು, ಯಾರೂ ಬೆರಳೆತ್ತಿ ತೋರಿಸುವುದಿಲ್ಲ, ನಿಂದನೆಗೂ ಅಸ್ಪದವಿರುವುದಿಲ್ಲ ಎಂದು ಸಮಝಾಯಿಸುತ್ತ, ಹೇಗೂ ಇವನು Americaಕ್ಕೆ ಹೋಗುತ್ತಿದ್ದಾನೆ,  ಸಧ್ಯ, ಇವನ ಬಗ್ಗೆ ನಾವೇನೂ ಚಿಂತಿಸಬೇಕಿಲ್ಲ,  ಮತ್ತೇ ಆ ಹುಡುಗಿಯೇಕೆ ಕಾಲೇಜಿಗೆ ಹೋಗಬೇಕು, ಹೀಗೆಂದು ಹೇಳುತ್ತಿರುವಾಗಲೇ ನಾನು ಕೇಳಲು ಮನಸ್ಸಿಲ್ಲದಿದ್ದರೂ ಕೇಳಿಸಿಕೊಳ್ಳಲೇಬೇಕಾಯ್ತು. ನನ್ನ ಮನಸ್ಸಿನ ಭಾವನೆಗಳಿಗೆ ಸ್ಪಂದಿಸಲು ಮತ್ತು ನನ್ನನ್ನು ಸಂತೈಸಲು ಯಾರೂ ನನ್ನ ಜೊತೆಗಿರಲಿಲ್ಲ. ನನ್ನ ಮನಸ್ಸಿನಲ್ಲಿದ್ದ ಸೌಂದರ್ಯ ವಿಮಾನದಲ್ಲಿ ಕುಳಿತು ನನ್ನನ್ನು ನೋಡಿ ವಿದಾಯ ಹೇಳುತ್ತಿದ್ದಳು.

end- ನಡೆದದ್ದು ಅಲ್ಲ imagination written sometime ಇನ್ 2002


.
back to  

end.

.