Monday 30 November 2020

ತುಂಬಾ ಬೋಳೇ ನನ್ನ ಪತ್ನಿ tumba bhole nanna patni

 


Imaginative write-up

ಕಥೆ या ಹರಟೆ - ತುಂಬಾ ಬೋಳೇ ನನ್ನ ಪತ್ನಿ tumba bhole nanna patni

'ಭೋಳೆ'  ಎಂಬುದು ಮರಾಠಿ ಯ ಶಬ್ಧ. ಹಿಂದಿಯಲ್ಲಿ ಇದನ್ನು 'ಭೋಲೆ' ಎಂತ ಕರೆಯುತ್ತಾರೆ. ಏನಿದು ಹೊಸ ಶಬ್ಧ ಕನ್ನಡದಲ್ಲಿ ಅಂತ ಖಂಡಿತ  ತಿಳಿಯಬೇಡಿ.  ಉತ್ತರ ಕರ್ನಾಟಕದಲ್ಲಿ ಸಾಮಾನ್ಯವಾಗಿ ಬಳಸುವ ಶಬ್ಧ ಇದು. ಭೋಳೆ ಎಂದರೆ ತುಂಬಾ ಸರಳ, ಅರಿಯದ, ಅಮಾಯಕ, ನಿರ್ಮಲ, ನಿಷ್ಕಪಟ ವ್ಯಕ್ತಿ ಎಂದು ತಿಳಿಯಿರಿ. 

ಈಗ ನಾನು ಹೇಳುತ್ತಿರುವ ಈ ನಿಷ್ಕಪಟ ವ್ಯಕ್ತಿಯೇ ನನ್ನ ಧರ್ಮ ಪತ್ನಿ. ಅವಳು ಸುಂದರಳು ಹೌದು. ಚಾಂದಿನಿಯೂ ಹೌದು, ಚಾಂದ್ ಕಾ ತುಕಡ ಕೂಡ ಹೌದು ಆ ಬ್ರಹ್ಮನು ತನ್ನ ಎಲ್ಲಾ ಕರಾಮತ್ತುಗಳನ್ನು ನನ್ನ ಪತ್ನಿಯಲ್ಲೇ ತೋರಿಸಿಬಿಟ್ಟಿದ್ದಾನೆ. ಹಾಗಾಗಿ ನಾನು ಕೆಲವೊಮ್ಮೆ ತಾಲಿಬಾನ್ ಪರ ಮಾತಾಡುವುದುಂಟು, ಕೇವಲ ಬುರ್ಖಾ ವಿಷಯದಲ್ಲಿ ಮಾತ್ರ. 

ಏನೂ ಇಂಥಹ ಚಾಂದಿನಿ ನನ್ನನ್ನು ಹೇಗೆ ವರಿಸಿದಳು ಅಂತ  ಯೋಚನೆ ಮಾಡುತ್ತಿದ್ದೀರಾ ? ನಿಜ. ನನ್ನನ್ನೋ ಬಡಪಾಯಿ, ಬಕರ, ಬಡವ, ಭಂಡ ಎಂತೆಲ್ಲ ನನ್ನ ಹಿಂದುಗಡೆ ಇತರರು ಕರೆದಿದ್ದುಂಟು. ಪ್ರಾಯಶಃ ಈ ವಿಶೇಷಣಗಳಲ್ಲಿ ಸತ್ಯಾಂಶ ಇದ್ದರೂ ನನ್ನವಳು ನನ್ನನ್ನು  ತನ್ನ ಪ್ರಾಣನಾಥ, ಪ್ರಾಣೇಶ... ಎಂತೆಲ್ಲ ಕರೆಯುತ್ತಾಳೆ ಎಂದ ಮೇಲೆ ಅವಳು ಎಷ್ಟು ಭೋಳೆ ಎಂದು ನೀವು ತಿಳಿಯಬಹುದಲ್ಲವೇ ?

ಹಳ್ಳಿಯಲ್ಲಿ ಹುಟ್ಟಿ ಮುಗ್ಧತೆಯಿಂದ ಬೆಳೆದು ನಾಲ್ಕನೇ ತರಗತಿಯವರೆಗೆ ಮಾತ್ರ ಓದಿ ನಂತರ ಶಾಲೆಯ ಮೆಟ್ಟಿಲು ಹತ್ತದಿದ್ದರೂ ಸುಸಂಸ್ಕೃತಳಾದ ನನ್ನ ಪತ್ನಿ ಎಲ್ಲಿ ಹೋದರೂ ತನ್ನ ಭೋಳೆ ಸ್ವಭಾವ ತಂತಾನೇ ವ್ಯಕ್ತಪಡಿಸಿರುವುದು ಎಲ್ಲರಿಗೂ ಗೊತ್ತಾಗುತ್ತದೆ.

ನನ್ನ ಮದುವೆಯ ವಿಷಯವನ್ನೇ ತೆಗೆದುಕೊಳ್ಳಿ. ಆಗಲೇ ಹೇಳಿದಂತೆ ನಾನು ನಿಜವಾಗಿಯೂ ಬಡಪಾಯಿ, ಬಡವ ಕೂಡ. ಕೆಲಸವೇ ಇಲ್ಲದೇ ಚಡಪಡಿಸುತ್ತಿದ್ದ ನನಗೆ ನೌಕರಿ ಸಿಕ್ಕಿದ್ದೂ ಒಂದು ಥರಾ ಅನಾಹುತದಿಂದಲೇ. ಎಲ್ಲಾ ಕಂಪನಿಯವರು ನನ್ನ ಫೋಟೋ ಮತ್ತು biodata ನೋಡಿದ ಕೂಡಲೇ ತಿರಸ್ಕಾರ ಮಾಡುತ್ತಿದ್ದವರು ಹೇಗೆ ಈ IT ಕಂಪನಿಯಲ್ಲಿ ಗುಮಾಸ್ತನ ಕೆಲಸ ಸಿಕ್ಕಿದೆ ಗೊತ್ತಾ ?  

IT ಕಂಪನಿಯ ಜನರಲ್ ಮ್ಯಾನೇಜರ್ ಗೂ ಡೆಪ್ಯೂಟಿ ಜನರಲ್ ಮ್ಯಾನೇಜರ್ ಗೂ ತಿಕ್ಕಾಟವಾಗಿ ತನ್ನ ಕಡೆಯ ಹುಡುಗನನ್ನೇ ಆರಿಸಿ ತೆಗೆದುಕೊಳ್ಳ ಬೇಕೆಂದು ಹಠ ಹಿಡಿದು ಕೂತಾಗ ಡೈರೆಕ್ಟರ್ ರವರು ಇಬ್ಬರನ್ನೂ reject ಮಾಡಿಬಿಟ್ಟರು. ಆಗ ಈ ಜನರಲ್ ಮತ್ತು ಡೆಪ್ಯೂಟಿ ಜನರಲ್ ಮ್ಯಾನೇಜರ್ ರವರು ಒಂದಾಗಿ ಒಬ್ಬ idiot candidate ಗೆ ತಡಕಾಡಿದರು. ನನ್ನ ಫೋಟೋ ಮತ್ತು biodata ನೋಡಿ ತಕ್ಷಣ ಸೆಲೆಕ್ಟ್ ಮಾಡಿಯೇಬಿಟ್ಟರು. interview ಕೂಡ ಸುಮ್ಮನೆ ನಾಮಕಾವಾಸ್ತೆ ಫೋನ್ ನಲ್ಲಿ ಮಾಡಿದ್ದರು. 

ನನಗೆ ಕೆಲಸ ಸಿಕ್ಕಿದ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿ ಹಳ್ಳಿಯಲ್ಲಿರುವ ನಮ್ಮ ದೂರದ ಸಂಬಂಧಿಯವರಿಗೆ ಕೂಡ ತಲುಪಿತು. ನನ್ನಾಕೆಯ ತಂದೆ ಮಗಳಿಗೆ ಹೇಳಿದರಂತೆ 'ಪಟ್ಟಣದಲ್ಲಿ ಇರೋ ಭುಜಂಗರಾಯರ ಮಗನಿಗೆ ಯಾವುದೋ ದೊಡ್ಡ ಕಂಪನಿಯಲ್ಲಿ ಕ್ಲಾರ್ಕ್ ಕೆಲಸ ಸಿಕ್ಕಿದೆಯಂತೆ. ನಿನ್ನನ್ನು ನೋಡಲು ಮುಂದಿನ ವಾರ ಬರುತ್ತಾರಂತೆ' ಹಾಗಂತ ಕಾಗದ ಬರೆದಿದ್ದಾರೆ.

ಇವಳು ನಾಚಿ ನೀರಾಗಿ ಭುಜಂಗರಾವ್ ಬರೆದ ಕಾಗದವನ್ನು ತೆಗೆದುಕೊಂಡು ಓದಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಳು. ಆದರೆ ಕಾಗದದಲ್ಲಿ ಬಹಳಷ್ಟು ಇಂಗ್ಲಿಷ್ ಶಬ್ಧಗಳು ಇದ್ದಿದ್ದರಿಂದ ಸರಿಯಾಗಿ ಅರ್ಥ ಆಗದೆ ಇದ್ದಾಗ್ಯೂ I.T. ಕಂಪನಿಯನ್ನು 'ಇಟ್' ಕಂಪನಿಯಲ್ಲಿ ಕೆಲಸ ಎಂದು ಓದಿ ತನ್ನ ಸ್ನೇಹಿತೆಯರಿಗೆ ಹೇಳಿದ್ದು ನಮ್ಮ ಮದುವೆಯ ದಿನ ನನಗೆ ಗೊತ್ತಾಯಿತು. 

ಮದುವೆ ಆಗಿ ನನ್ನ ಪತ್ನಿಯನ್ನು ಪಟ್ಟಣದ ಬಾಡಿಗೆ ಮನೆಗೆ  ಕರೆತಂದಿದ್ದು ಆಯ್ತು. ೩ ತಿಂಗಳು ಕಳೆದಿರಬಹುದು. ಆದರೂ ತನ್ನ ತವರು ಮನೆಗೆ ಹೋಗಲು ನನ್ನನ್ನು ಕೇಳದಿರುವ ಕಾರಣ ನಂತರ ನನಗೆ ಗೊತ್ತಾಯಿತು. ಪಟ್ಟಣದಲ್ಲಿ ಒಬ್ಬಳೇ ಬಸ್ಸು ನಿಲ್ದಾಣಕ್ಕೆ ಹೋಗಲು ಗೊತ್ತಿಲ್ಲ, ಸಂಜೆಯ ನಂತರದ ಪ್ರಯಾಣಕ್ಕೆ ಭಯ, ಒಬ್ಬಳೇ ಪ್ರಯಾಣ ಮಾಡಲು ಧೈರ್ಯವಿಲ್ಲದ್ದರಿಂದ ಹಳ್ಳಿಗೆ ಹೋಗುವ ವಿಷಯ ನನ್ನಲ್ಲಿ ಪ್ರಸ್ತಾಪ ಮಾಡಿರಲಿಲ್ಲ. ನನಗೂ ಕೆಲಸ ಹೊಸದು, ರಜೆ ಸಿಗುವುದು ಕಷ್ಟ, ಹೀಗಾಗಿ ಇವಳ ತವರಿನ ಬಗ್ಗೆ ಅಷ್ಟು ಗಮನ ಕೊಟ್ಟಿರಲಿಲ್ಲ. ನನ್ನವಳ ಆ ಸುಂದರ ಮುಖದಲ್ಲಿ ಚಿಂತೆಯ ಛಾಯೆಯನ್ನು ಗುರುತಿಸಿದಾಗ ನಾನೇ ಊಹಿಸಿ ವಿಷಯ ತಿಳಿದುಕೊಂಡೆ. ಅವಳಿಗೆ ಹೇಳಿದೆ "ಈಗ ನನಗೆ ರಜೆ ಇಲ್ಲ, ಒಬ್ಬಳೇ ನೀನು ಹೋಗುವುದಿಲ್ಲ ಎಂದು ಬೇರೆ ಹೇಳುತ್ತೀಯ. ಒಂದು ಪತ್ರ ಬರೆದು ಹಾಕು, ಮಾವನವರು ಬಂದು ಕರೆದುಕೊಂಡು ಹೋಗಲಿ". ಊರಿನ ವಿಳಾಸವನ್ನು ನಾನೇ ಬರೆದು ಒಂದು ಇನ್ಲಾಂಡ್ ಲೆಟರ್ ಕೊಟ್ಟೆ. ಕಾಗದ ಬರೆದ ನಂತರ ಕಾಗದ ಮಾಡಚಲು ತಡಕಾಡಿ ಮುಗ್ಧತೆಯಿಂದ ಮತ್ತೇ ನನ್ನನ್ನೇ ಮೊರೆ ಹೊಕ್ಕಾಗ, ಆ ಕೆಲಸವನ್ನೂ ಮಾಡಿ" ಇನ್ನು ಇದನ್ನು ಅಂಚೆ ಡಬ್ಬಿಗೆ ಹಾಕಲು ನನಗೇ ಹೇಳಬೇಡ" ಎಂದೆ.  

ನಮ್ಮೂರಿನಿಂದ ಇವಳ ಹಳ್ಳಿಗೆ ಪತ್ರ ತಲುಪಲು ಒಂದು ದಿನ ಸಾಕು. ಆದರೆ ಆರೇಳು ದಿನಗಳಾದರೂ ಮಾವನವರು ಬರಲಿಲ್ಲ, ಕಾಗದವೂ ಬರಲಿಲ್ಲ. 8 ನೆಯ ದಿನದ ರಾತ್ರಿ ಎದುರು ಮನೆಯವರು ಬಂದು ಬಾಗಿಲು ತಟ್ಟಿ ನಾನು ಕೊಟ್ಟಿದ್ದ, ಇವಳು ಬರೆದಿದ್ದ ಕಾಗದವನ್ನೇ ನನಗೆ ಕೊಟ್ಟರು. ಅವರು ಊರಿನಲ್ಲಿ ಐದಾರು ದಿನಗಳು ಇರಲಿಲ್ಲ, ಇಂದು ಸಂಜೆ ಬಂದಾಗ ಕೆಂಪು ಮೇಲ್ ಡಬ್ಬಿಯಲ್ಲಿ ನಮ್ಮ ಪತ್ರ ಅವರಿಗೆ ಸಿಕ್ಕಿತ್ತು. ಕೂಡಲೇ ಎಲ್ಲಾ ಅರ್ಥವಾಯಿತು. ಎದುರು ಮನೆಯಲ್ಲಿ ಬಾಗಿಲಿಗೆ ಹಾಕಿರುವ ಕೇಪು ಡಬ್ಬಿಯಲ್ಲಿ ನನ್ನವಳು ಪತ್ರ ಹಾಕಿದ್ದಳು. 

ನಂಜನಗೂಡಿನ ಹಲ್ಲುಪುಡಿಯನ್ನೇ ಉಪಯೋಗಿಸುತ್ತಿದ್ದ ನನ್ನ ಪತ್ನಿಗೆ colgate ಪೇಸ್ಟ್ ಉಪಯೋಗಿಸಲು ಪರದಾಡಿದಳು. ಕೆಲವೊಮ್ಮೆ ನನ್ನ ಶೇವಿಂಗ್ ಕ್ರೀಮ್ ಉಪಯೋಗಿಸಿದ್ದುಂಟು. ಟೂತ್ ಬ್ರಶ್ ಮಾತ್ರ ಬಾಚಣಿಕೆ ಸ್ವಚ್ಛ ಮಾಡಲು ಉಪಯೋಗಿಸುತ್ತಾಳೆ. 

ನನ್ನ ಆಫೀಸಿನ LTC ಸೌಲಭ್ಯ ಉಪಯೋಗಿಸಿ ಸ್ನೇಹಿತನಿದ್ದ ಮುಂಬಯಿಗೆ ಕರೆದೊಯ್ದೆ. ಸ್ನೇಹಿತನ ಆರ್ಥಿಕ ಪರಿಸ್ಥಿತಿ ನನ್ನ ಹಾಗೆಯೇ ಇದ್ದಿದ್ದರಿಂದ ಮುಂಬಯಿ ನೋಡಲು ನಾವು BEST ಬಸ್ಸುಗಳನ್ನೇ ಅವಲಂಬಿಸಿದೆವು. ಒಮ್ಮೆ ಬಸ್ಸಿನಲ್ಲಿ ಗಂಡಸರ ಪಕ್ಕ ಇದ್ದ ಖಾಲಿ ಜಾಗದಲ್ಲಿ ನನ್ನ ಸ್ನೇಹಿತನ ತಂಗಿ ಕುಳಿತು ನನ್ನಾಕೆಯನ್ನೂ  ಕರೆದಳು. ಇವಳು "ಏನು ಗಂಡಸರ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದೀಯ, ನಾನಿರಲಿ, ನೀನು ಏಳು" ಎಂದಳು. ನಾವೆಲ್ಲ ಎಷ್ಟು ಸಮಜಾಯಿಸಿದರೂ "ಹೀಗೆಲ್ಲ ಹುಡುಗಿಯರ ಸ್ವಭಾವ ಇದ್ದರೆ ಮುಂದೆ ಒಳ್ಳೆಯ ಗಂಡು ಸಿಗುವುದು ಕಷ್ಟ" ಎಂದಾಗ, ಸ್ನೇಹಿತನ ತಂಗಿಯ ಪಕ್ಕದಲ್ಲಿ ಇರುವವ "ಭಾಭಿ, ಇಲ್ಲಿ ಬಂದು ನನ್ನ ಜಾಗದಲ್ಲಿ ಕುಳಿತುಕೊಳ್ಳಿ" ಎಂದು  ಹೇಳಿ ಎದ್ದಾಗ, ನನ್ನಾಕೆಯು ಮುಂಬಯಿ ನಗರದಲ್ಲಿ ಬಹಳ ಕನ್ನಡಿಗರು ಇದ್ದಾರೆಂದು ತಿಳಿದು ತಲೆ ತಗ್ಗಿಸಿದಳು. ಇವಳ ಹಳ್ಳಿಯ ಪರಿಸರ ನನ್ನ ಕಣ್ಣು ಮುಂದೆ ಹಾದು ಹೋಗಿ ಇವಳ ಭೋಳೆ ಸ್ವಭಾವ ಈ ಅನಾಹುತಕ್ಕೆ ಎಡೆ ಮಾಡಿಕೊಟ್ಟಿತ್ತು. 

ಮಧ್ಯಾನ್ಹ ದ ಊಟಕ್ಕೆ VT ಯ flora fountainನ ಬಳಿಯಿರುವ ಹೋಟೆಲಿಗೆ ಹೋಗಿ Q ನಿಂತಾಗ,  ಉದ್ದನೆಯ Q ನೋಡಿ ಇವಳು ಸಿನೆಮಾ ನೋಡಲು ಟಿಕೆಟ್ ನ Q ಎಂದು ಭಾವಿಸಿದಳು.  ಮುಂಬಯಿಯ ಮಹಾಲಕ್ಷ್ಮಿ ದೇವತೆಯ ದರ್ಶನದ ನಂತರ ನಡೆಯುತ್ತಿದ್ದಾಗ ಇವಳು ಯಾಕೋ ಕುಂಟುತ್ತಿರುವುದು ಕಂಡಿತು. ಏನೆಂದು ಗಮನಿಸಿದಾಗ ಇವಳು ದೇವಸ್ಥಾನದಿಂದ ಬರುವಾಗ ಒಂದು  ಕಾಲಿಗೆ ತನ್ನ ಚಪ್ಪಲಿ ಇನ್ನೊಂದು ಕಾಲಿಗೆ ಯಾರದ್ದೋ high healed ಚಪ್ಪಲಿ ಧರಿಸಿದ್ದು ನಮ್ಮೆಲ್ಲರ ನಗೆಗೆ, ಇವಳ ಮುಗ್ಧತೆಗೆ ಸಾಕ್ಷಿಯಾಗಿತ್ತು. ಹಿಂದೆ ಇವಳು ಒಂದು ಕಾಲಿಗೆ ಲೆದರ್ ಚಪ್ಪಲಿ ಮತ್ತೊಂದಕ್ಕೆ ಹವಾಯಿ ಚಪ್ಪಲಿ, ಅಥವಾ ಎಡಗಾಲಿನ ಚಪ್ಪಲಿ ಬಲಗಾಲಿಗೆ ಮಾತ್ತು ಬಲಗಾಲಿನದ್ದು ಎಡಗಾಲಿಗೆ ಹಾಕಿದ್ದು ನನ್ನ ಮನಸ್ಸಿನಲ್ಲಿ ಹಾದು ಹೋಯಿತು. ಇವಳ ಭೋಳೆ ಸ್ವಭಾವದ ಬಗ್ಗೆ ಅಯ್ಯೋ ಎನಿಸಿತೆನೆಗೆ.

ಜುಹೂ ಬೀಚ್ ಗೆ ಬಂದಾಗ ಆಗಲೇ ಮೂಡಣದಲ್ಲಿ ರವಿ ಮರೆಯಾಗಲು ತವಕಿಸುತ್ತಿದ್ದನು. ಆ ಸುಂದರ ಸಂಜೆ ಎಂದಿಗೂ ಮರೆಯಲಸಾಧ್ಯ. ಬೀಚಿನಲ್ಲಿ ಸ್ಕರ್ಟ್ ಹಾಕಿ ಓಡಾಡುತ್ತಿದ್ದ ಒಬ್ಬಾಕೆಯ ಮುಖ ನೋಡಿ ಇವಳು " ರೀ ಆ ಹುಡುಗಿ ನೋಡಿ, ಪಾಪ ಮುಖ ಸುಕ್ಕಾಗಿದೆಯಲ್ಲ" ಎಂದಾಗ ಅವರು 70 ವಯಸ್ಸಿನವರು ಎಂದಾಗ ತಬ್ಬಿಬ್ಬಾದಳು. ಮತ್ತೆ ಹೇಳಿದಳು "ಯಾಕೆ ಅವರು ಸರಿಯಾದ ಬಟ್ಟೆ ಹಾಕಿಲ್ಲ, ಅವರ ಯಜಮಾನರು ಇಂತಹ ಬಟ್ಟೆ ಹಾಕಲು ಬಿಡುತ್ತಾರಾ, ಅಕ್ಕ ಪಕ್ಕದವರು ಸುಮ್ಮನೆ ಇರುತ್ತಾರಾ" ಎಂತೆಲ್ಲ ಪ್ರಶ್ನೆಗಳ ಸುರಿಮಳೆಗಳ ಉತ್ತರಕ್ಕಾಗಿ ಹುಡುಕಾಡಿದೆ. ಹಾಗೆಯೇ ಇವಳ ಸುಂದರ ಮುಖಕ್ಕಿಂತಲೂ ಇವಳ ಭೋಳೆ ಸ್ವಭಾವ ನನ್ನಲ್ಲಿ ಹೆಚ್ಚು ಆಕರ್ಷಿತವಾಗಿದ್ದನ್ನು ನನ್ನ ಹೃದಯದಲ್ಲಿ ಸ್ಪಂದನ ಮುಖಾಂತರ ಅನುಭವಿಸಿದೆ.

end- ನಡೆದದ್ದು ಅಲ್ಲ imagination written sometime ಇನ್ 2002

.
back to  

end.

.

No comments:

Post a Comment