Thursday 10 June 2021

ಸಂಕಲ್ಪದಲ್ಲಿ ಬೌದ್ಧಾವತಾರೆ ಪದ ವಿಶ್ಲೇಷಣೆ bouddhavataare in sankalpa explanation




ನಾವು ಸಂಕಲ್ಪ (ಸಂಧ್ಯಾವಂದನೆ ಅಥವಾ ಪೂಜೆ ಅಥವಾ ಹೋಮ ಅಥವಾ ಶ್ರಾದ್ಧ ಕಾರ್ಯ) ಮಾಡುವಾಗ ಹೇಳುವ 'ಬೌದ್ಧಾವತಾರೆ ಶ್ರೀರಾಮ ಕ್ಷೇತ್ರೇ' ಯಲ್ಲಿ ಬರುವ ಬೌದ್ಧಾವತಾರ ಯಾವುದು. ಯಾವ ಯುಗದಲ್ಲಿ ಈ ಅವತಾರವಾಯಿತು ಎನ್ನುವುದು ಸಾಮಾನ್ಯವಾಗಿ ಎಲ್ಲ ಬ್ರಾಹ್ಮಣರನ್ನು ಕಾಡುವ ಪ್ರಶ್ನೆ. ನಾವು ಸಂಕಲ್ಪ ಮಾಡುವಾಗ ಈ ಪದವನ್ನು ಉಪಯೋಗಿಸಬೇಕೇ ಅಥವಾ ಮಾರ್ಪಾಡು ಮಾಡುವ ಅಗತ್ಯವಿದಯೇ ಎಂಬುದು ಎರಡನೆಯ ಪ್ರಶ್ನೆ.  


ನಮ್ಮ ಭಾರತದ ಅತಿ ಹಿಂದಿನ ಇತಿಹಾಸಕಾರರು ಹಿಂದೆ ನಡೆದಂತಹ ರಾಮಾಯಣ ಅಥವಾ ಮಹಾಭಾರತ ಇವುಗಳ ಬಗ್ಗೆ ಸಾಕಷ್ಟು ತನಿಖೆಗಳನ್ನು ಮಾಡಿಲ್ಲದ ಕಾರಣ ರಾಮಾಯಣ ಅಥವಾ ಮಹಾಭಾರತದ ಕಾಲ ನಿರ್ಣಯವನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಯಾರೋ ಪಾಶ್ಚಿಮಾತ್ಯ ಇತಿಹಾಸಕಾರರು ಬರೆದಿರುವ ಮಾಹಿತಿಯ ಆಧಾರದ ಮೇಲೆ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಹಾಗಾಗಿ ಅತಿ ಈಚಿನ ಕೃಷ್ಣಾವತಾರದ ಕಾಲ ಸರಿಯಾಗಿ ಹೇಳುವುದು ಕಷ್ಟ ಎನ್ನುವುದು ಸಾಮಾನ್ಯ ಅಭಿಪ್ರಾಯ.


ಆದರೂ ಎನ್ ಸಿ ಲಾಹರಿ ಪ್ರಶಸ್ತಿ ವಿಜೇತ, ಮದ್ರಾಸಿನ ಪ್ರೊಫೆಸರ್ ಕೆ ಆರ್ ಶ್ರೀನಿವಾಸರಾಘವನ್ ರವರು ನಿಖರವಾಗಿ ಶ್ರೀ ಕೃಷ್ಣನ ಕಾಲಮಾನದ ವಿವರ ಕೊಟ್ಟಿದ್ದಾರೆ. ಈ ಕಾಲಮಾನ ಶ್ರೀ ನಾರಾಯಣಾಚಾರ್ಯರ ಮಹಾಭಾರತ ಪಾತ್ರಪ್ರಪಂಚದ ಮುನ್ನುಡಿಯಲ್ಲಿ ಈ ಕೆಳಕಂಡಂತೆ ಇದೆ.

  1. ಕೃಷ್ಣಾವತಾರ - ಕ್ರಿ ಪೂ. 3112 ಜುಲೈ 27 ಶುಕ್ರವಾರ ರಾತ್ರಿ 11.40
  2. ಯುಧಿಷ್ಠಿರನ ಜನನ - ಕ್ರಿ ಪೂ. 3114 ಆಗಸ್ಟ್ 31 ಮಂಗಳವಾರ  (ಕೃಷ್ಣನಿಗಿಂತ 696 ದಿನ ದೊಡ್ಡವನು)
  3. ಮಹಾ ಯುದ್ಧ - ಕ್ರಿ ಪೂ. 3067 ನವೆಂಬರ್ 22 ಶುಕ್ರವಾರ, ಮಾರ್ಗಶಿರ ಶುಕ್ಲ ಏಕಾದಶಿ 
  4. ಶ್ರೀಕೃಷ್ಣ ನಿರ್ಯಾಣ - ಕ್ರಿ ಪೂ. 3031 ಏಪ್ರಿಲ್ 13


ಶ್ರೀ ನರಹರಿಯವರ ‘ಬುದ್ಧಾವತಾರ’ ಕೃತಿಯಲ್ಲಿ ಈ ಕೆಳಗಿನ ವಿವರ ನೋಡಬಹುದು. 

ಬ್ರಹ್ಮ ಪುರಾಣವು ಬುದ್ಧ ನನ್ನು ವಿಷ್ಣುಸ್ತೋತ್ರದಲ್ಲಿ ಅವತಾರ(೧೨೨.೬೯)ವೆಂದರೂ ಅಧ್ಯಾಯ ೨೧೩ ರಲ್ಲಿ ಬುದ್ಧನನ್ನು ವರ್ಣಿಸುವುದಿಲ್ಲ. 

ಎಲ್ಲ ಪುರಾಣಗಳು ಕ್ರಿ ಶ ಎಂಟನೆಯ ಶತಮಾನದ ಹೊತ್ತಿಗೆ ಬುದ್ಧನನ್ನು ಒಂಬತ್ತನೆಯ ಅವತಾರ ಎಂದು ಒಪ್ಪಿಕೊಂಡವು.


ಇನ್ನು ಕೆಲವರು ಒಂಬತ್ತನೆಯ ಅವತಾರದ ಬುದ್ಧ ಹಾಗೂ ಇತಿಹಾಸದ ಬುದ್ಧ ಇವರಿಬ್ಬರೂ ಬೇರೆ ಎಂದು ಪ್ರತಿಪಾದಿಸುತ್ತಾರೆ. ಅವತಾರವಾದ ಬುದ್ಧ ನ ಹೆಸರು 'ಸುಗತ ಬುದ್ಧ' ತಾಯಿಯ ಹೆಸರು ಅಂಜನ, ಹುಟ್ಟಿದ್ದು ಬೋಧ್ ಗಯ, ಹುಟ್ಟಿರುವ ಕಾರಣ ತ್ರಿಪುರಾಸುರನನ್ನು ಕೊಲ್ಲುವುದಕ್ಕೆ ಸಹಾಯ ಮಾಡಲು ಬತ್ತಲೆಯಾಗಿ ಕುಳಿತು ತ್ರಿಪುರಾಸುರಿಯನ್ನು ಆಕರ್ಷಣೆ ಮಾಡುತ್ತಾನೆ. (ಆಧಾರ-ಬ್ರಹ್ಮಾಂಡ ಪುರಾಣ) ಇತಿಹಾಸದ ಬುದ್ಧನ ಹೆಸರು 'ಸಿದ್ದಾರ್ಥ' (ಗೌತಮ-ಬುದ್ಧ), ತಾಯಿಯ ಹೆಸರು ಮಾಯ, ಹುಟ್ಟಿದ್ದು ಲುoಬಿಣಿ, ಹಿಂದೂ ಧರ್ಮವನ್ನೇ ನಂಬದವನು.


ಇನ್ನು ದಾಸ ಸಾಹಿತ್ಯದಲ್ಲಿ (ಕಾಲ 1400+) ಬುದ್ಧನನ್ನು ಒಂಬತ್ತನೆಯ ಅವತಾರವೆಂದು ಪರಿಗಣಿಸಿದ್ದು ದಶಾವತಾರ ಕೃತಿಗಳಲ್ಲಿ ಬುದ್ಧನನ್ನು ಪೂಜಿಸಿದ್ದಾರೆ. ಈ ಕೆಳಗಿನ ಪುರಂದರ ದಾಸರ ಕೃತಿ ಇದನ್ನು ಪುಷ್ಟೀಕರಿಸುತ್ತದೆ.

ಪುರಂದರ ದಾಸರ (ಕಾಲ ಕ್ರಿ.ಶ. 1480 - 1564) ಪಂಕಜ ಮುಖಿಯರೆಲ್ಲರು ಬಂದು

ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ

ಮತ್ಸ್ಯಾವತಾರಗೆ ಮಂದರೋದ್ಧಾರಗೆ

ಅಚ್ಚರಿಯಿಂದ ಭೂಮಿ ತಂದವಗೆ ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ

ಲಕ್ಶ್ಮೀ ನರಸಿಂಹಗಾರತಿ ಎತ್ತಿರೆ ವಾಮನ ರೂಪಲಿ ದಾನ ಬೇಡಿದವಗೆ

ಪ್ರೇಮದಿ ಕೊಡಲಿಯ ಪಿಡಿದವಗೆ ರಾಮಚಂದ್ರನಾಗಿ ದಶ ಶಿರನನು ಕೊಂದ

ಸ್ವಾಮಿ ಶ್ರೀ ಕೃಷ್ಣಗಾರತಿ ಎತ್ತಿರೆ ಬತ್ತಲೆ ನಿಂತಗೆ ಬೌದ್ಧಾವತಾರಗೆ

ಉತ್ತಮ ಅಶ್ವನೇರಿದಗೆ ಭಕ್ತರ ಸಲಹುವ ಪುರಂದರ ವಿಟ್ಠಲಗೆ

ಮುತ್ತೈದೆಯರಾರತಿ ಎತ್ತಿರೆ


ಉಪನಿಷತ್ ಗಳ ಅಥವಾ ಪುರಾಣಗಳ ಪ್ರಕಾರ ಕೃಷ್ಣನ ಅವತಾರದ ನಂತರದಲ್ಲಿ ಈ ಬುದ್ಧನ ಅವತಾರವಾಗಿರುವುದು ಸ್ಪಷ್ಟ. ಈ ಬಗ್ಗೆ ಯಾರಲ್ಲೂ ಬೇಧವಿಲ್ಲ. ಆದರೆ ನಾವು ಈ ಬುದ್ಧನನ್ನು ಯಾವ ಬ್ರಾಹ್ಮಣ ಮನೆಯಲ್ಲಿಯೂ ಪೂಜಿಸುವುದಿಲ್ಲ. ಏಕಿರಬಹುದು, ಇದೇ ಈ ಲೇಖನದ ಉದ್ದೇಶ. 


ಮೊದಲು ಈ ದಶಾವತಾರಗಳು ಯಾವುದು ಎಂಬುದನ್ನು ನೋಡೋಣ. 

  1. ಮತ್ಸ್ಯ ಅವತಾರ 
  2. ಕೂರ್ಮ ಅವತಾರ 
  3. ವರಾಹ ಅವತಾರ
  4. ನೃಸಿಂಹ  ಅವತಾರ
  5. ವಾಮನ ಅವತಾರ
  6. ಪರಶುರಾಮ ಅವತಾರ 
  7. ಶ್ರೀರಾಮ ಅವತಾರ 
  8. ಶ್ರೀಕೃಷ್ಣ ಅವತಾರ 
  9. ಬಲರಾಮ ಅವತಾರ ಇಲ್ಲಾ ಬೌದ್ಧ ಅವತಾರ
  10. ಕಲ್ಕೀ ಅವತಾರ 


ಈ ದಶಾವತಾರಗಳ ಕ್ರಮದಲ್ಲೂ ಅನುಮಾನಗಳಿವೆ. ಮೇಲೆ ಕೊಟ್ಟಿರುವ ಅವತಾರಗಳ ಕ್ರಮವು ಹೆಚ್ಚು ಜನರ ಅಭಿಪ್ರಾಯವಾಗಿದೆ.  


ನನಗೆ ಗೊತ್ತಿರುವ ಹಾಗೆ ಈ ದಶಾವತಾರಗಳಲ್ಲಿ ಮೊದಲನೆಯ ಎರಡು ಅವತಾರಗಳ ದೇವರರುಗಳನ್ನು ನಾವು ಪೂಜಿಸುವುದು ಕಾಣುವುದಿಲ್ಲ, ಹಾಗೆಯೇ ಇವುಗಳ ಚಿತ್ರಪಟ ಗಳನ್ನು ನಾವು ಮನೆಯಲ್ಲಿ ಪೂಜಿಸಲಿಕ್ಕೆ ಇಟ್ಟಿರುವುದನ್ನು ನಾನು ನೋಡಿಲ್ಲ. ಈ ಎರಡು ಅವತಾರಗಳು ಬ್ರಹ್ಮಾಂಡದಲ್ಲಿ ನಡೆದಿದ್ದು ಬಹಳ ಹಿಂದಿನವು ಮತ್ತು ಹಿಂದಿನ ಸಮುದಾಯ ಪ್ರಾಮುಖ್ಯತೆ ಕೊಟ್ಟಿಲದೇ ಇರುವಂಥಹದು ಎನ್ನುವ ಕಾರಣ ಕೊಡಬಹುದು. ಕೆಲವೇ ಬೆರಳಣಿಕೆಯಷ್ಟು ಮತ್ಸ್ಯಅವತಾರದ  ಮತ್ತು ಕೂರ್ಮ ಅವತಾರದ ದೇವಸ್ಥಾನಗಳು ಆಂಧ್ರ/ತಮಿಳುನಾಡು ಪ್ರದೇಶದಲ್ಲಿ ಇವೆ. ಕೂರ್ಮ ಜಯಂತಿಯನ್ನು ವೈಶಾಖ ಹುಣ್ಣಿಮೆಯಂದು ಆಚರಿಸುತ್ತಾರೆ. ಮತ್ಸ್ಯ ಜಯಂತಿಯನ್ನು ಚೈತ್ರ ಶುಕ್ಲ ತ್ರಿತೀಯದಂದು ಆಚರಣೆ ಮಾಡುತ್ತಾರೆ.


ಮೂರನೆಯ ಅವತಾರವಾದ ವರಾಹ ಅವತಾರವೂ ಸಹ ಅಷ್ಟು ಪ್ರಚಲಿತವಿಲ್ಲ. ಆದರೆ ವರಾಹ ಮೂರ್ತಿಯ ಗುಡಿ/ ದೇವಸ್ಥಾನಗಳನ್ನು ದಕ್ಷಿಣ ಭಾರತದ ಸಾಕಷ್ಟು ಕಡೆಗಳಲ್ಲಿ ನಾವು ನೋಡಬಹುದು. ವರಾಹ ಜಯಂತಿಯನ್ನು ಭಾದ್ರಪದ ಶುಕ್ಲ ತ್ರಿತೀಯದಂದು ಆಚರಣೆ ಮಾಡುತ್ತಾರೆ. 


ಐದನೆಯ ಅವತಾರವಾದ ವಾಮನ ಅವತಾರ ಹಾಗೂ ಆರನೆಯ ಅವತಾರವಾದ ಪರಶುರಾಮ ಅವತಾರಗಳೂ ಸಹ ಅಷ್ಟು ಪ್ರಾಮುಖ್ಯತೆ ಪಡೆದಿಲ್ಲ.  ಅಂದರೆ ಕೇವಲ ನಾವು ಇವರಿಬ್ಬರ ಜನುಮ ಜಯಂತಿ ವರುಷಕ್ಕೊಮ್ಮೆ ಮನೆಗಳಲ್ಲಿ/ ದೇವಸ್ಥಾನಗಳಲ್ಲಿ ಮಾಡುವ ಪದ್ದತಿ ಇದೆ. ವಾಮನ ಜಯಂತಿಯನ್ನು ಭಾದ್ರಪದ ಶುಕ್ಲ ದ್ವಾದಶಿಯಂದು ಆಚರಣೆ ಮಾಡುತ್ತೇವೆ. ಪರಶುರಾಮ ಜಯಂತಿಯನ್ನು ವೈಶಾಖ ಶುಕ್ಲ ತ್ರಿತೀಯ (ಅಕ್ಷಯ ತದಿಗೆ)ಯಂದು ಉತ್ಸವ ಆಚರಿಸಲಾಗುತ್ತದೆ. ಈ ಎರಡು ದೇವರುಗಳ ಚಿತ್ರಪಟ ಕೆಲವು ಮನೆಗಳಲ್ಲಿ ನೋಡುತ್ತೇವೆ ಆದರೆ  ಪ್ರತಿಯೊಬ್ಬ ಬ್ರಾಹ್ಮಣ ಮನೆಯಲ್ಲಿ ನಾವು ನೋಡುವುದಿಲ್ಲವೆಂಬುದು ಸತ್ಯ, ಮತ್ತು ಇವರಿಬ್ಬರ ಗುಡಿಗಳು ಬಹಳ ವಿರಳ, ಅರ್ಥಾತ್ ಇವರಿಬ್ಬರನ್ನು ಪೂಜಿಸುವುದು ಬಹಳ ಕಡಿಮೆ.


ನಾಲ್ಕನೆಯ ಅವತಾರವಾದ ಶ್ರೀ ನೃಸಿಂಹ ಅವತಾರ (ವೈಶಾಖ ಶುಕ್ಲ ಚತುರ್ದಶಿ), ಏಳನೆಯ ಅವತಾರವಾದ ಶ್ರೀರಾಮ ಅವತಾರ (ಚೈತ್ರ ಶುಕ್ಲ ನವಮಿ) ಮತ್ತು ಎಂಟನೆಯ ಅವತಾರವಾದ ಶ್ರೀಕೃಷ್ಣ ಅವತಾರ (ಚಾಂದ್ರಮಾನ-ಶ್ರಾವಣ ಕೃಷ್ಣ ಅಷ್ಟಮಿ) ಸಾಕಷ್ಟು ಖ್ಯಾತಿ ಪಡೆದು ಎಲ್ಲ ಬ್ರಾಹ್ಮಣರ ಮನೆಗಳಲ್ಲಿ ಈ ಅವತಾರಗಳ ಬಗ್ಗೆ ಸಾಕಷ್ಟು ಮಾಹಿತಿ, ನಂಬಿಕೆ ಇರುವುದನ್ನು ನಾವು ಸರ್ವೇಸಾಮಾನ್ಯವಾಗಿ ನೋಡುತ್ತೇವೆ. ಬ್ರಾಹ್ಮಣರ ಮನೆಗಳಲ್ಲಿ ಈ ಮೂರು ಅವತಾರಗಳ ದೇವರ ಪಟಗಳನ್ನು ನಾವು ಕಾಣಬಹುದು. ಈ ದೇವರುಗಳನ್ನು ಪ್ರತಿನಿತ್ಯ ಪೂಜಿಸುವುದನ್ನು ಎಲ್ಲ ಬ್ರಾಹ್ಮಣರು ಮಾಡುತ್ತಾರೆ. ಶ್ರೀನೃಸಿಂಹ, ಶ್ರೀರಾಮ ಮತ್ತು ಶ್ರೀಕೃಷ್ಣ ದೇವರುಗಳ ಜೊತೆಗೆ ಇತರೆ ದೇವರುಗಳಾದ ಈಶ್ವರ, ಗಣಪತಿ, ಸರಸ್ವತಿ ಮುಂತಾದ ದೇವರುಗಳನ್ನೂ ಸಹ ಪ್ರತಿನಿತ್ಯ ಪೂಜಿಸುತ್ತಾರೆ. ಶ್ರೀನೃಸಿಂಹ, ಶ್ರೀರಾಮ ಮತ್ತು ಶ್ರೀಕೃಷ್ಣ ದೇವರುಗಳ ಬಹಳಷ್ಟು ಗುಡಿ/ ದೇವಸ್ಥಾನಗಳನ್ನು ನಾವು ಭಾರತದಾದ್ಯಂತ ನೋಡಬಹುದು. ಹಾಗೆಯೇ ಇತರೆ ದೇವರುಗಳಾದ ಈಶ್ವರ, ಗಣಪತಿ, ಸರಸ್ವತಿ ಮುಂತಾದ ದೇವರುಗಳ ಗುಡಿ / ದೇವಸ್ಥಾನಗಳನ್ನೂ ಭಾರತದಾದ್ಯಂತ ಬಹಳಷ್ಟು ಸ್ಥಾಪಿಸಲಾಗಿದೆ. 


ಆದರೆ ಒಂಬತ್ತನೆಯ ಅವತಾರವಾದ ಬೌದ್ಧಾವತಾರದ ಬಗ್ಗೆ ಸಾಕಷ್ಟು ಗೊಂದಲಗಳು ಅಥವಾ ಸಂದೇಹಗಳು ಬ್ರಾಹ್ಮಣರಲ್ಲಿ ಕಂಡು ಬರುತ್ತದೆ. 


ಹತ್ತನೆಯ ಅವತಾರವಾದ ಕಲ್ಕೀ ಇನ್ನೂ ಜನ್ಮ ತಾಳಬೇಕಿದೆ. ಇದಿಷ್ಟು ಸಂಕ್ಷಿಪ್ತವಾಗಿ ದಶಾವತಾರಗಳ ಬಗ್ಗೆ ಮಾಹಿತಿ.


ಈಗ ಪ್ರಸ್ತುತ ವಿಷಯಕ್ಕೆ ಬರೋಣ 

ಕೆಲವು ಪಂಗಡಗಳು ಈ ಒಂಬತ್ತನೇ ಅವತಾರ ಬಲರಾಮ ಅವತಾರ ವೆಂದೂ ಹೇಳುತ್ತಾರೆ. ವಿಶ್ಲೇಷಣೆ ಮಾಡಿದಾಗ ಒಟ್ಟಿಗೆ ಕೃಷ್ಣಾವತಾರ ಮತ್ತು ಬಲರಾಮ ಅವತಾರ ಆಗಿರಲು ಸಾಧ್ಯವಿಲ್ಲ. ಏಕೆಂದರೆ ಇಬ್ಬರೂ ಅಣ್ಣ ತಮ್ಮಂದಿರು, ಒಂದೇ ಮನೆಯಲ್ಲಿ ಇದ್ದವರು, ಹಾಗೂ ಬಲರಾಮ ಕೂಡ ಶ್ರೀ ಕೃಷ್ಣನನ್ನು ಭಗವಂತ ರೂಪ ವೆಂದು ಒಪ್ಪಿಕೊಳ್ಳುತ್ತಾನೆ. ಹೀಗಾಗಿ ಈ ಒಂಬತ್ತನೇ ಅವತಾರ ಬಲರಾಮ ಅವತಾರ ಎಂಬುದನ್ನು ನಾವು ತಳ್ಳಿ ಹಾಕಬಹುದು. ಹಾಗಾಗಿ ಉಳಿಯುವುದು ಬೌದ್ಧಾವತಾರ. ಈ ಒಂಬತ್ತನೇ ಅವತಾರ ಬೌದ್ಧವಾತರ ಎಂದು ಹೇಳಬಹುದು. 


ಅತಿ ಮುಖ್ಯ ವಿಷಯವೇನೆಂದರೆ ಈ ಬುದ್ಧನ ಪ್ರತಿಮೆ ಬ್ರಾಹ್ಮಣರ ಮನೆಯಲ್ಲಿ ಇಲ್ಲದೇ ಇರುವುದು. ಚಿತ್ರಪಟವೂ ಇಲ್ಲ, ಹಾಗಾಗಿ ಪೂಜೆ ಮಾಡುವ ವಿಧಾನ ವಿಲ್ಲ ಎಂದು ಸೈದ್ಧಾಂತಿಕ ಪ್ರತಿಪಾದನೆ ಮಾಡಬಹುದು. ಆದರೆ ನಾವು ಸಂಕಲ್ಪ ಮಾಡುವಾಗ (ಸಂಧ್ಯಾವಂದನೆ ಅಥವಾ ಪೂಜೆ ಅಥವಾ ಹೋಮ ಅಥವಾ ಶ್ರಾದ್ಧ ಕಾರ್ಯ) ಈ ಕೆಳಗಿನ ಮಂತ್ರವನ್ನು ಉಚ್ಚರಿಸುತ್ತೇವೆ.

ಆಚಮನಮಾಡಿ 

ಶುಭೇ ಶೋಭನೇ ಮಹೂರ್ತೇ-ಆದ್ಯಬ್ರಹ್ಮಣಃ ದ್ವಿತೀಯ ಪರಾರ್ಧೇ-ಶ್ವೇತವರಾಹಕಲ್ಪೇ-ವೈವಸ್ವತ  ಮನ್ವಂತರೇ- ಅಷ್ಟವಿಂಶತಿ ಚತುರ್ಯುಗೇ-ಕಲಿಯುಗೇ-ಪ್ರಥಮಪಾದೇ (ಪ್ರಥಮಚರಣೇ) -ವ್ಯಾವಹಾರಿಕೆ-ಶಾಲಿವಾಹನಶಕೆ -ಬೌದ್ಧಾವತಾರೆ-ಶ್ರೀರಾಮಕ್ಷೆತ್ರೇ-ಅಸ್ಮಿನ್ ವರ್ತಮಾನೇ---- ನಾಮ ಸಂವತ್ಸರೇ -ಉತ್ತರಾ/ದಕ್ಷಿಣಾಯಣೆ -ಋತೌ -ಮಾಸೇ-ಪಕ್ಷೆ-ತಿಥೌ-ವಾಸರೇ-ನಕ್ಷತ್ರೇ-ಯೋಗೆ-ಕರಣೆ-

ಏವಂ ಗುಣವಿಶಿಷ್ಟಾಯಾಂ-ಶುಭತಿಥೌ-ಸಾರ್ಧತ್ರಿಕೋಟಿ ಸಮಸ್ತ ತೀರ್ಥಾಭಿಮಾನಿ ದೇವತಾ ಸನ್ನಿಧೌ, ಸಾಲಿಗ್ರಾಮ,ಚಕ್ರಾಂಕಿತ-ವಿಷ್ಣು-ವೈಷ್ಣವ-ಗೊ-ತುಳಸಿ -ವೃಂದಾವನ ಸನ್ನಿಧೌ- ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಮಧುಸೂದನಪ್ರೀತ್ಯರ್ಥಂ...... ನಂತರ  ವಿಧಿ ಹೇಳುವುದು (ಅಂದರೆ ಪ್ರಾತಃ ಸಂಧ್ಯಾಮ್ ಕರಿಷ್ಯೆ / ವೈಶಾಖ ಸ್ನಾನಮ್ ಕರಿಷ್ಯೆ etc)..

or


ಶ್ರೀ ಕೃಷ್ಣ ಕೃಷ್ಣಾದ್ಯ ಭಗವತೋ – ಮಹಾಪುರುಷಸ್ಯ – ವಾಸುದೇವಸ್ಯ – ವಿಷ್ಣೋರಾಜ್ಞಯಾ – ಪ್ರವರ್ತಮಾನಸ್ಯ – ಅದ್ಯಬ್ರಹ್ಮಣೋ – ದ್ವಿತೀಯಪರಾರ್ಧೆ – ಶ್ವೇತವರಾಹ ಕಲ್ಪೇ – ವೈವಸ್ವತ ಮನ್ವಂತರೇ – ಕಲಿಯುಗೇ – ಪ್ರಥಮಪಾದೇ – ಜಂಬೂದ್ವೀಪೇ – ಭಾರತವರ್ಷೇ – ಭರತಖಂಡೇ  – ಮೇರೋರ್ದಕ್ಷಿಣ ಪಾರ್ಶ್ವೇ – ಗೋರಾಷ್ಟ್ರದೇಶೇ – ಗೋಕರ್ಣಮಂಡಲೇ  – ಶಾಲಿವಾಹನಶಕ ವರ್ಷೇ – ಬೌದ್ಧಾವತಾರೆ  – ಪರಶುರಾಮಕ್ಷೇತ್ರೇ – ಶಕಾಬ್ದೆಸ್ಮಿನ್ ವರ್ತಮಾನ ವ್ಯಾವಹಾರಿಕೇ- ( )ನಾಮ ಸಂವತ್ಸರೇ -(ಉತ್ತರೆ /ದಕ್ಷಿಣ)ಆಯನೇ-( )ಋತೌ- ()ಮಾಸೇ-( )ಪಕ್ಷೇ – ( )ತಿಥೌ –  ( )ವಾಸರಯುಕ್ತಾಯಾಂ –

–  (ಗೋತ್ರ) (ನಕ್ಷತ್ರೆ ) (ರಾಶೌ) (ಹೆಸರು)ಶರ್ಮಣೋ  ‘ಮಮ‘..– ಜನ್ಮ ರಾಶ್ಯಪೇಕ್ಷಯಾ – ಯೇ ಯೇ ಗ್ರಹಾಃ ಅರಿಷ್ಟ ಸ್ಥಾನೇಷು ಸ್ಥಿತಾಃ ತೇಷಾಂ ಗ್ರಹಾಣಾಂ ಶುಭಏಕಾದಶ ಸ್ಥಾನಫಲಾವಾಪ್ತ್ಯರ್ಥಂ, ಸಮಸ್ತ ಕಾರ್ಯೇಷು ಶ್ರೀ ಮಹಾಗಣಾಧೀಶ್ವರ ಪೂರ್ಣಾನುಗ್ರಹ ಪ್ರಾಪ್ತ್ಯರ್ಥಂ, ಸಮಸ್ತ ದೈವೀ ಸಂಪದಭಿವೃದ್ಯರ್ಥಂ, ಚಿಂತಿತ ಕಾರ್ಯೇಷು ನಿರ್ವಿಘ್ನತಾ ಶೀಘ್ರಮೇವ ಸಮಾಪ್ತ್ಯರ್ಥಂ, ........... ಕರಿಷ್ಯೆ


ನಾವು ಇಲ್ಲಿ ಗಮನಿಸ ಬೇಕಾದ ಅಂಶ ಅಂದರೆ ‘ಬೌದ್ಧಾವತಾರೆ’ ಎನ್ನುವುದನ್ನು ಪ್ರತಿನಿತ್ಯ ಮತ್ತು ಪ್ರತಿಕರ್ಮದಲ್ಲೂ (ಸಂಧ್ಯಾವಂದನೆ/ ಸಂಕಲ್ಪ) ಉಪಯೋಗಿಸುತ್ತೇವೆ. ಹಾಗಿರುವಾಗ ನಾವು ಏಕೆ ಈ ಬುದ್ಧನ ಪ್ರತಿಮೆಯನ್ನು ಅಥವಾ ಚಿತ್ರಪಟವನ್ನು ಮನೆಯಲ್ಲಿ ಇಟ್ಟುಕೊಂಡಿಲ್ಲ ಮತ್ತು ಪೂಜಿಸುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆ. 


ಬುದ್ಧ ಯಾರು ಎಂಬ ಬಗ್ಗೆ ಬಹಳಷ್ಟು ವ್ಯತ್ಯಾಸಗಳಿವೆ. ಇತಿಹಾಸದಲ್ಲಿ ಬರುವ, ನಾವು ಶಾಲೆಯಲ್ಲಿ ಓದುವ ಬುದ್ಧ ಈ ಬೌದ್ಧಾವತಾರದ ಬುದ್ಧನೇ ಎಂದು ಬ್ರಾಹ್ಮಣರು ಒಪ್ಪಿಕೊಳ್ಳುತ್ತಿಲ್ಲ. ಕಾರಣ ಅವನು ಭಗವಂತನ ಮೇಲೆ ನಂಬಿಕೆ ಇಟ್ಟಿರಲಿಲ್ಲ ಮತ್ತು ಅವನು ಹಿಂದೂ ಧರ್ಮಕ್ಕೆ ಪರ್ಯಾಯವಾಗಿ ಬೌದ್ಧ ಧರ್ಮ ಸ್ಥಾಪಿಸಿದವನು. ಈ ಸಾಮಾನ್ಯ ನಂಬಿಕೆ ಸರಿಯಾಗಿಯೇ ಇರಬಹುದು. ಹಾಗಿದ್ದರೆ ಬೌದ್ಧಾವತಾರದ ಬುದ್ಧ ಯಾರು ?


ಸಾಕಷ್ಟು ಬ್ರಾಹ್ಮಣ ಸಮುದಾಯಗಳು ಒಂಬತ್ತನೆಯ ಅವತಾರದಲ್ಲಿ ಬರುವ ಬುದ್ಧನೇ  ಬೇರೆ. ಬೌದ್ಧ ಧರ್ಮ ಸಂಸ್ಥಾಪಕ ಬುದ್ಧನೇ ಬೇರೆ ಎಂದು ಪ್ರತಿಪಾದಿಸುತ್ತಾರೆ. ತ್ರಿಪುರಾಸುರನ ವಧೆಗಾಗಿ ಈ ಬುದ್ಧನ ಅವತಾರವಾಯಿತು ಎಂದು ಬ್ರಹ್ಮಾಂಡ ಪುರಾಣದಲ್ಲಿ ತಿಳಿಸಲ್ಪಟ್ಟಿದೆ. ಶ್ರೀ ಬನ್ನಂಜೆ ಗೋವಿಂದಚಾರ್ಯರು ಈ ಪ್ರತಿಪಾದನೆಯನ್ನು ಅನುಮೋದಿಸುತ್ತಾರೆ. ಬಹಳಷ್ಟು ಜನ ಬುದ್ಧ ಕೇವಲ ಕೆಲವೇ ಸಮಯ ಮಾತ್ರವೇ ಬದುಕಿ ಇದ್ದದ್ದನ್ನು ಪ್ರತಿಪಾದಿಸುತ್ತಾರೆ. 


ಹಲವರು ಸಮಯ ಗಣನೆ ಮೇರೆಗೆ ಇತಿಹಾಸದ ಬೌದ್ಧ ಧರ್ಮ ಸ್ಥಾಪಕ ಬುದ್ಧ ಮತ್ತು ಒಂಬತ್ತನೆಯ ಅವತಾರ ಎಂದು ಪರಿಗಣಿಸುವ ಬುದ್ಧ ಒಬ್ಬನೇ ಎಂದೂ ಪ್ರತಿಪಾದಿಸುತ್ತಾರೆ. ಮತ್ತೆ ಹೇಗೆ ಈ ಬುದ್ಧ ಬ್ರಾಹ್ಮಣರ ನಂಬಿಕೆಗೆ ವಿರುದ್ಧವಾಗಿ ಮಾತನಾಡಬಹುದೆಂದು ಪ್ರಶ್ನೆ ಉದ್ಭವಿಸುವುದು ಸಾಮಾನ್ಯ. ಅದಕ್ಕೆ ಬುದ್ಧನ ‘ಎಲ್ಲವೂ ನಶ್ವರ’ ಎಂಬ ಹೇಳಿಕೆಗೆ ಕೆಲವು ತಿರುವುಗಳನ್ನೂ (twist) ಕೊಡುತ್ತಾರೆ. ವಿಶ್ವನಂದಿನಿ websiteನ  ಕೇವಲ 3 ನಿಮಿಷದ ಈ video/audio ಕೇಳಿರಿ. 

http://vishwanandini.com/fullupanyasa.php?serialnumber=VNU831


ಹಾಗಾದರೆ ನಾವೇಕೆ ಬುದ್ಧನನ್ನು ಪೂಜಿಸುವುದಿಲ್ಲಾ ಎಂಬುದಕ್ಕೆ ಮತ್ತು ನಾವು ಹೇಳುವ ಸಂಕಲ್ಪದಲ್ಲಿ ಬೌದ್ಧಾವತಾರೆ ಎಂಬ ಪದವನ್ನು ಬಳಸುತ್ತಿರುವ ಬಗ್ಗೆ ಸಮರ್ಪಕ ಉತ್ತರ ನನಗೆ ಇನ್ನೂ ದೊರಕಬೇಕಿದೆ. ನನ್ನ ಅನಿಸಿಕೆಗಳನ್ನು ಇಲ್ಲಿ ತಿಳಿಸಲು ಇಷ್ಟಪಡುತ್ತೀನಿ.


  1. 24 ನೇ ತೀರ್ಥಂಕರನಾದ ಮಹಾವೀರ / ವರ್ಧಮಾನ ಜೈನ ಧರ್ಮದ ಪ್ರಚಾರಕರು ಮತ್ತು ಜೈನ ಧರ್ಮವನ್ನು ಉತ್ತುಂಗಕ್ಕೆ ತಲುಪಿಸಿದಂತಹವರು. ಇವರ ಕಾಲ  ಕ್ರಿ. ಪೂ. 599 - 527 BCE or ಕ್ರಿ. ಪೂ 527 - 468 BCE.   
  2. ಹಾಗೆಯೇ ಬುದ್ಧ (ಸಿದ್ಧಾರ್ಥ) ಒಬ್ಬ ರಾಜ ಕುವರ, ರಾಜ್ಯವನ್ನು ತ್ಯಜಿಸಿ ಬೌದ್ಧ ಧರ್ಮ ಸ್ಥಾಪಿಸಿದವರು. ಇವರ ಕಾಲ ಕ್ರಿ. ಪೂ. 563 - 483 BCE or ಕ್ರಿ. ಪೂ 480 - 400 BCE.
  3. ಮಹಾವೀರ ಮತ್ತು ಬುದ್ಧ ಇಬ್ಬರೂ ಸಮಕಾಲೀನರೆಂದು ಹೇಳಬಹುದು.
  4. ನಂದರ (9 ರಾಜರು) ಆಡಳಿತ ಕಾಲ ಕ್ರಿ. ಪೂ. 424 -  ಕ್ರಿ. ಪೂ. 321 BCE. 
  5. ಚಂದ್ರಗುಪ್ತ ಮೌರ್ಯನ ರಾಜ್ಯದ ಆಡಳಿತ ಕಾಲ ಕ್ರಿ. ಪೂ. 321 - 297 BCE.
  6. ಚಕ್ರವರ್ತಿ ಅಶೋಕನ ರಾಜ್ಯದ ಆಡಳಿತ  ಕಾಲ ಕ್ರಿ. ಪೂ. 268 - 232 BCE.
  7. ಗುಪ್ತರ ರಾಜ್ಯ ಕಾಲ ಕ್ರಿ. ಶ. 240 - 540 AD.
  8. ಹರ್ಷವರ್ಧನನ ರಾಜ್ಯ ಕಾಲ ಕ್ರಿ. ಶ. 590 - 647 AD. (ಹರ್ಷವರ್ಧನ ಬೌದ್ಧ ಧರ್ಮ ಬಿಟ್ಟು ಹಿಂದೂ ಧರ್ಮ ಸ್ವೀಕರಿಸಿದವನು)


ಭಾರತ ಹಿಂದೂ ಧರ್ಮ ಅನುಯಾಯಿಗಳ ಪ್ರಧಾನ ರಾಷ್ಟ್ರ. ನಂದರ ಕಾಲದಲ್ಲಿ ಹಿಂದು ಧರ್ಮ ಅನುಯಾಯಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಹಿಂದೂ ಧರ್ಮದ ಜೊತೆಗೆ ಅಜಿವಿಕ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮ ಅತಿ ಅಲ್ಪ ಸಂಖ್ಯೆಯಲ್ಲಿ ಇದ್ದರು. ನಂದರ ಕಾಲದಲ್ಲಿ ಹಿಂದೂ ಧರ್ಮದ ಅತಿಯಾದ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಲಾಗುತ್ತಿತ್ತು. ರಾಜ್ಯದ ಮಂತ್ರಿವರ್ಯರು ಸ್ವಾಭಾವಿಕವಾಗಿ ಬ್ರಾಹ್ಮಣರಾಗಿದ್ದರು. ರಾಜ್ಯದ ಆಡಳಿತವನ್ನು ನೋಡಿಕೊಳ್ಳುವವರು ಸಾಮಾನ್ಯವಾಗಿ ಬ್ರಾಹ್ಮಣರಿದ್ದರು.  ಸಂಸ್ಕೃತ ಭಾಷೆ ಬ್ರಾಹ್ಮಣೇತರಿಗೆ ಕಲಿಯಲು ಕಷ್ಟವಾಗುತ್ತಿತ್ತು, ಆಡು ಭಾಷೆಗೆ ಪ್ರಾಮುಖ್ಯತೆ ಇರಲಿಲ್ಲ. ಜನ ಸಾಮಾನ್ಯರು ಬ್ರಾಹ್ಮಣರ ಕಟ್ಟು ನಿಟ್ಟಿನ ನಿಯಮಗಳಿಂದ ಬೇಸತ್ತು ಹೋಗಿದ್ದರು. ಹೀಗಾಗಿ ಜನರಲ್ಲಿ ಹಿಂದೂ ಧರ್ಮದ ಬಗ್ಗೆ ಗೌರವ ಕಡಿಮಯಾಗುತ್ತ ಬಂದಿತ್ತು. 


ಚಂದ್ರಗುಪ್ತ ಮೌರ್ಯ ರಾಜನಾಗಿ (ಆಡಳಿತ ಕಾಲ ಕ್ರಿ. ಪೂ. 321 - 297 BCE ) ಸುಮಾರು 24 ವರ್ಷದ ನಂತರ ಲೌಕಿಕ ಜಗತ್ತಿನಿಂದ ಬೇಸತ್ತು ಜೈನ ಧರ್ಮವನ್ನು ಸ್ವೀಕರಿಸುತ್ತಾನೆ. ಜೈನ ಮುನಿಗಳಾದ ಭದ್ರಬಾಹು ಮತ್ತು ಸಂಗಡಿಗರ ಜೊತೆಗೆ ದಕ್ಷಿಣದ ಶ್ರವಣಬೆಳಗೊಳಕ್ಕೆ ಬಂದು ತನ್ನ ಕೊನೆಯ ದಿನಗಳನ್ನು ಕಳೆಯುತ್ತಾನೆ. ಮಹಾವೀರನ ನಂತರದ ಜೈನ ಮುನಿಗಳು ಸಾಕಷ್ಟು ಪ್ರಚಾರ ಮಾಡಿದರ ಫಲದಿಂದ  ಜೈನ ಧರ್ಮದ ವಿಚಾರವನ್ನು ಅನುಮೋದಿಸಿ ಅನೇಕ ಪ್ರದೇಶದ ರಾಜರುಗಳು ಜೈನ ಧರ್ಮವನ್ನು ಸ್ವೀಕರಿಸುತ್ತಾರೆ.


ಹಾಗೆಯೇ ಅಶೋಕ ರಾಜನು (ಆಡಳಿತ  ಕಾಲ ಕ್ರಿ. ಪೂ. 268 - 232 BCE) 34 ವರ್ಷಗಳ ಆಡಳಿತ ನಡೆಸಿದನು. ಆದರೆ ಕಳಿಂಗ ಯುದ್ಧದ ನಂತರ (ಕ್ರಿ. ಪೂ. 261) ಅಶೋಕನು ಬೌದ್ಧ ಧರ್ಮದ ಕಡೆ ವಾಲಿದನು ಮತ್ತು ತನ್ನ ಸಾಮ್ರಾಜ್ಯದಲ್ಲಿ ಬೌದ್ಧ ಪ್ರಚಾರಕ್ಕೆ ಮನ್ನಣೆ ಕೊಟ್ಟು ಅನೇಕ ಬೌದ್ಧ ಸ್ಮಾರಕಗಳನ್ನು ನಿರ್ಮಿಸಿದನು. ತನ್ನ ಆಡಳಿತ ಅವಧಿಯ ಸುಮಾರು 25 ವರ್ಷಕ್ಕೂ ಹೆಚ್ಚು ಕಾಲವನ್ನು ಬೌದ್ಧ ಧರ್ಮ ಪ್ರಚಾರದ ಕಡೆಗೆ ಗಮನ ಕೊಟ್ಟಿದ್ದನು. ಈ ಸಮಯದಲ್ಲಿಯೇ ಬೌದ್ಧ ಧರ್ಮ ತನ್ನ ಉತ್ತುಂಗದ ಸ್ಥಿತಿಯನ್ನು ತಲುಪುತ್ತದೆ. ಹಳೆಯ ಭಾರತದ ಮಧ್ಯ, ಪೂರ್ವ ಹಾಗೂ ಉತ್ತರ ದಿಕ್ಕುಗಳಲ್ಲಿ ಬೌದ್ಧ ಧರ್ಮ ಹೆಚ್ಚು ಪ್ರಚಾರ ಕಂಡಿತು. ಚೀನಾದಲ್ಲಿ ಇಂದು ನಾವು ಕಾಣುವ ಬೌದ್ಧ ಧರ್ಮ, ರಾಜ ಅಶೋಕನ ಕೊಡುಗೆ ಎಂದೂ ನನ್ನ ಅನಿಸಿಕೆ. ಅವನ ಮಕ್ಕಳಿಬ್ಬರು ಈಗಿನ ಶ್ರೀಲಂಕಾ ದಲ್ಲಿ ಬೌದ್ಧ ಧರ್ಮದ ಸ್ಥಾಪನೆಗೆ ಮುಂದಾದರು.


ಹಿಂದೂ ಧರ್ಮದಲ್ಲಿ ಕಠಿಣ ನಿಯಮಗಳನ್ನು ಪಾಲಿಸುವ ಬಗ್ಗೆ ಬ್ರಾಹ್ಮಣರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಸಾಕಷ್ಟು ರಾಜರ ಮುಖಾಂತರ ಮತಾಂತರಿ ಹಿಂದುಗಳನ್ನು ಮತ್ತೆ ಹಿಂದುಗಳನ್ನಾಗಿ ಮಾಡಲು ಬಹಳ ಕಷ್ಟ ಪಡಬೇಕಾಗುತ್ತದೆ. ರಾಜ ಚಂದ್ರಗುಪ್ತ 1 (ಮಹಾ ರಾಜಾಧಿರಾಜ ಚಂದ್ರಗುಪ್ತ ಎಂದು ಪ್ರಸಿದ್ಧಿ - ಚಂದ್ರಗುಪ್ತ ಮೌರ್ಯ ಅಲ್ಲ) ನಿಂದ ಉತ್ತುಂಗದ ಸ್ಥಿತಿಯಲ್ಲಿದ್ದ ಗುಪ್ತರ ಕಾಲದಲ್ಲಿ ಅಂದರೆ ಕ್ರಿ. ಶ. 319 - 495 AD ಹಿಂದುಗಳಿಗೆ ಮತ್ತೆ ಮೊದಲಿನ ಮಹತ್ವ ಸಿಕ್ಕಿತು. ಮತ್ತೆ ಭಾರತವನ್ನು ಹಿಂದೂ ದೇಶವನ್ನಾಗಿಸಿದ ಕಾಲವದು. ಹಾಗೆಯೇ ರಾಜ ಹರ್ಷವರ್ಧನನ ರಾಜ್ಯಾಡಳಿತ ಕಾಲವೂ (ಕ್ರಿ. ಶ. 590 - 647 AD) ಸಹ ಹಿಂದೂ ಧರ್ಮದ ಬೆಳವಣಿಗೆಯ ಮಹತ್ವದ ಸಮಯ. (ಹರ್ಷವರ್ಧನ ಬೌದ್ಧ ಧರ್ಮ ಬಿಟ್ಟು ಹಿಂದೂ ಧರ್ಮ ಸ್ವೀಕರಿಸಿದವನು)


ಸಾಮಾನ್ಯವಾಗಿ ಯಾವಾಗ ಒಬ್ಬ ಧೈರ್ಯಶಾಲಿ ಮತ್ತು ಸಮರ್ಥ ರಾಜ ತನ್ನ ಕುಟುಂಬದ ಧರ್ಮವನ್ನು ಇತರೆ ಧರ್ಮಕ್ಕೆ ಮತಾಂತರ ಗೊಂಡಾಗ ರಾಜನ ಆಡಳಿತ ವರ್ಗ ರಾಜನನ್ನೇ ಹಿಬಾಲಿಸುವುದು ಸರ್ವೇ ಸಾಮಾನ್ಯ. ನಂತರ ರಾಜನನ್ನು ಖುಷಿ ಪಡಿಸಲು ಸೇನೆಯ ಮುಖಾಂತರ ರಾಜ್ಯದ ಜನರನ್ನು ಮತಾಂತರಗೊಳಿಸುವುದು ಕೂಡ ಒಪ್ಪಬೇಕಾದ ತರ್ಕ. ಹಾಗಾಗಿಯೇ ಚಂದ್ರಗುಪ್ತ ಮೌರ್ಯ (ಕ್ರಿ. ಪೂ. 297) ನಂತರದ ಕಾಲದಲ್ಲಿ ಜೈನ ಧರ್ಮದ ಪ್ರಚಾರದಿಂದ ಜೈನ ಧರ್ಮದ ಅನುಯಾಯಿಗಳು ಪಶ್ಚಿಮ ಭಾರತ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಹೆಚ್ಚುತ್ತಾ  ಹೋಯಿತು. ಈಗಲೂ ಕರ್ನಾಟಕದ ಹಾಸನ ಜಿಲ್ಲೆ, ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಜೈನ ಸಮುದಾಯಗಳನ್ನು ಕಾಣಬಹುದು. ಮತ್ತು ಹಾಗೆಯೇ ರಾಜ ಚಕ್ರವರ್ತಿ ಅಶೋಕ (ಕ್ರಿ. ಪೂ. 261 - 232 BCE) ಬೌದ್ಧ ಮತವನ್ನು ಅನುಸರಿಸಿ ನಂತರ ಸುಮಾರು 25 ವರ್ಷಗಳ ಕಾಲ ಬೌದ್ಧ ರಾಜನಾಗಿ ಆಡಳಿತ ನಡೆಸಿದರ ಫಲ ಬೌದ್ಧ ಧರ್ಮ ಉತ್ತುಂಗದ ಸ್ಥಿತಿ ಕಂಡಿತು. 


ಗುಪ್ತರ ಕಾಲದಲ್ಲಿ ಮತ್ತು ನಂತರದ ರಾಜರುಗಳ ಸಮಯದಲ್ಲಿ ಬೌದ್ಧ ಮತದಿಂದ ಹಿಂದುಗಳಾದ ಜನರಿಗೆ ವಿಶ್ವಾಸ ಮೂಡಿಸಲು  ಮತ್ತು ಮತಾಂತರಗೊಂಡ ಹಿಂದುಗಳ ಪುನರ್ಮತಾಂತರ ವಾಗದಿರಲು ಬ್ರಾಹ್ಮಣ ಪಂಡಿತರುಗಳು ತಮ್ಮ ಕಾರ್ಯ ವೈಖರಿಯಲ್ಲಿ ಈ ಬುದ್ಧನಿಗೆ ಮನ್ನಣೆ ಕೊಟ್ಟಿರಬಹುದು. ಹಾಗೂ ಬುದ್ಧನೂ ವಿಷ್ಣುವಿನ ಒಂಬತ್ತನೆಯ ಅವತಾರ ಎಂದು ಒಪ್ಪಿಸಿ ಹಿಂದೂ ಧರ್ಮವನ್ನು ಕಾಪಾಡಿಕೊಳ್ಳಲು ಯತ್ನಿಸಿರಬಹುದು. ಹಾಗಾಗಿಯೇ ಸಂಕಲ್ಪ ಮಾಡುವಾಗ ಈ ಬೌದ್ಧಾವತಾರೆ ಶ್ರೀರಾಮಕ್ಷೇತ್ರೇ ಎಂಬುದನ್ನು ಸೇರಿಸಿರಬಹುದು. ಕಾಲಕ್ರಮೇಣ ಬೌದ್ಧ ಧರ್ಮ ಭಾರತದಲ್ಲಿ ನಾಶವಾದರೂ ಈ ಬೌದ್ಧಾವತಾರೆ ಹಾಗೆಯೇ ಉಳಿದುಬಿಟ್ಟಿರಬಹುದು. ನಮ್ಮ ವೈದಿಕ ಸಂಸ್ಕಾರಗಳನ್ನು ಉಳಿಸಲಿಕ್ಕೆ ಮತ್ತು ಹಿಂದೂ ಧರ್ಮವನ್ನು ಪುನರ್ಸ್ಥಾಪಿಸಲಿಕ್ಕೆ ಈ ಒಂದು ಪದ ಬಹಳ ಮುಖ್ಯ ಪಾತ್ರ ವಹಿಸಿದೆ. ಇದರ ಕರ್ತೃ ಯಾರಿರಬಹುದು? ನನಗೆ ತಿಳಿದಿಲ್ಲ. 


ಸಂಕಲ್ಪದಲ್ಲಿ ಬೌದ್ಧಾವತಾರೆ ಎಂಬ ಪದ ಗುಪ್ತರ ಕಾಲದಲ್ಲಿ ಉಪಯೋಗಿಸದಿದ್ದ ಪಕ್ಷದಲ್ಲಿ, ಉಳಿದಿದ್ದ ಬೌದ್ಧ ಧರ್ಮದ ಅನುಯಾಯಿಗಳನ್ನು ಬೌದ್ಧ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್ಸು ಮತಾಂತರ ಮಾಡಲಿಕ್ಕೆ ಈ ಬೌದ್ಧಾವತಾರೆ ಎಂಬುದನ್ನು ಶ್ರೀ ಆದಿ ಶಂಕರಾಚಾರ್ಯರು (ಕ್ರಿ.ಶ. 788 - 820 AD)  ಉಪಯೋಗಿಸಿರಬಹುದೇ ಎಂಬ ವಿಚಾರವೂ ನನ್ನ ಮನಸ್ಸಿನಲ್ಲಿದೆ.


ಹಾಗಾಗಿ ಕೆಳಗಿನ ಪ್ರಶ್ನೆಗಳನ್ನು ಕೂಡ ಗಮನಿಸಬಹುದು

  1. ಸಂಕಲ್ಪದಲ್ಲಿ ಬೌದ್ಧಾವತಾರೆ ಎನ್ನುವುದು ಏಕಿರಬೇಕು, ತೆಗೆದುಬಿಡಬಹುದೇ 
  2. ಸಂಕಲ್ಪದಲ್ಲಿ ಬೌದ್ಧಾವತಾರೆ ಎನ್ನುವುದಕ್ಕೂ ಮುಂಚೆ ಕೃಷ್ಣಾವತಾರೆ ಎಂದು ಇತ್ತೇ ಎನ್ನುವುದು ಇನ್ನೊಂದು ಪ್ರಶ್ನೆ. 
  3. ಬೌದ್ಧಾವತಾರೆ ಮಾತ್ರ ಏಕೆ ಇದೆ,  ಅಂದರೆ ಶ್ರೀಮತ್ಸ್ಯ, ಶ್ರೀಕೂರ್ಮ, ಶ್ರೀವರಾಹ, ಶ್ರೀನೃಸಿಂಹ, ಶ್ರೀವಾಮನ, ಶ್ರೀಪರುಶರಾಮ, ಶ್ರೀರಾಮ, ಶ್ರೀಕೃಷ್ಣ  ಹೇಳಿ ನಂತರ ಶ್ರೀ ಬೌದ್ಧಾವತಾರೆ  ಎಂದೇಕೆ ಇಲ್ಲ ಎನ್ನುವುದೂ ಕೂಡ ಮಗದೊಂದು ಪ್ರಶ್ನೆ. 
  4. ಸಂಕಲ್ಪ ಮಾಡುವಾಗ ಈ ಬೌದ್ಧಾವತಾರೆ ಬದಲು ನಮ್ಮ ಮನೆ ಕುಲದೇವರ ಹೆಸರನ್ನು ಸೇರಿಸಿಕೊಂಡರೆ ಹೇಗೆ ? 
  5. ಎಷ್ಟೊಂದು ಅವತಾರಗಳ ದೇವರುಗಳನ್ನು, ಅಂದರೆ ಹಯಗ್ರೀವ, ಶ್ರೀನಿವಾಸ ಮುಂತಾದವರುಗಳನ್ನು ಏತಕ್ಕಾಗಿ ಅವತಾರಗಳೆಂದು ಪರಿಗಣಿಸಿಲ್ಲ ? 

 

ಇಷ್ಟು ನನಗೆ ಅನ್ನಿಸಿರುವ ವಿಶ್ಲೇಷಣೆ. ತಪ್ಪಿರಬಹುದು. ಯಾರಾದರೂ ಈ ಬಗ್ಗೆ ಇತರೆ ವಿಶ್ಲೇಷಣೆ, ಇತರೆ  ವಿಚಾರ, ಇತರೆ ಮಾಹಿತಿ ಮತ್ತು ಅಧಿಕ ಮಾಹಿತಿ ಇದ್ದರೆ ದಯಮಾಡಿ ತಿಳಿಸಿರಿ. ಮಾಹಿತಿ ಎಲ್ಲಿಯದು ಯಾವ ಆಧಾರದ್ದು ಮತ್ತು ಸಮಯ/ಕಾಲ ತಿಳಿಸಿರಿ.

****

end- written ಸಂಟೈಂ ಇನ್ June 2021 


ಈ ಲೇಖನವನ್ನು ನನ್ನ ಸ್ನೇಹಿತರು ಕೆಳಕಂಡಂತೆ ಪ್ರತಿಕ್ರಿಯಿಸಿದ್ದಾರೆ. ಅವರಿಗೆ ಧನ್ಯವಾದಗಳು.

Quote

1. ಡಾ.ಕಬ್ಬಿನಾಲೆ ವಸಂತಭಾರದ್ವಾಜ, ಅಷ್ಟಾವಧಾನಿಗಳು 

  1. ಹತ್ತು ಅವತಾರಗಳಲ್ಲಿ ಒಂಬತ್ತನೆಯ ಬುದ್ಧಾವತಾರ ಆಗಿದೆ. ಆದುದರಿಂದಲೇ ಸಂಕಲ್ಪಕಾಲದಲ್ಲಿ ಅದರ ಉಲ್ಲೇಖ. ಪುರಾಣದಲ್ಲಿ ಬರುವ ತ್ರಿಪುರಾಸುರ ಸಂಹಾರಕಾಲದಲ್ಲಿ ಈ ಅವತಾರವಾಯ್ತು. ತ್ರಿಪುರಾಸುರನ ಪತ್ನಿಯ ಪಾತಿವ್ರತ್ಯವಿರುವಷ್ಟು ಕಾಲ ಅವನ ವಧೆಯಾಗುವುದಿಲ್ಲ. ಅದಕ್ಕಾಗಿ ನಾರಾಯಣನು ಮೋಹಕರೂಪದಿಂದ ಬರುತ್ತಾನೆ. ವ್ರತಸ್ಥೆಯಾದ  ರಾಕ್ಷಸನ ಹೆಂಡತಿ ಅವನನ್ನು ಆಲಿಂಗಿಸಲು ಬಂದಾಗ ಹರಿಯು ಅಶ್ವತ್ಥವೃಕ್ಷವಾಗಿ ನಿಲ್ಲುತ್ತಾನೆ. ಆಗ ಅವಳ ಪಾತಿವ್ರತ್ಯಭಂಗವಾಗುತ್ತದೆ. ತ್ರಿಮೂರ್ತಿಗಳು ತ್ರಿಪುರಾಸುರನನ್ನು ವಧಿಸುತ್ತಾರೆ. ಈ ಉಲ್ಲೇಖ ದಾಸಾಹಿತ್ಯದಲ್ಲಿ ಅನೇಕ ಕಡೆ ಬರುತ್ತದೆ. 
  2. ಆದರೆ ಪಾತಿವ್ರತ್ಯಭಂಗ ಒಂದು ಮೌಲ್ಯವಾಗುವುದಿಲ್ಲ. ಅವತಾರದ ಸಮರ್ಥನೆಗೆ ಕಷ್ಟವಾಗುತ್ತದೆ. ಆದರೆ ಭಗವಂತನನ್ನೇ ಪತಿಯೆಂದು ಭಾವಿಸುವುದು ಭಕ್ತಿಯೇ ಎಂಬುದು ಸಂದೇಹಕ್ಕೆ ಸಮಾಧಾನವಾಗಿದೆ. ವ್ರತಪೂರ್ಣಕಾಲದಲ್ಲಿ ಭಗವಂತ ಒಲಿಯುವುದು ಸಹಜ.
  3. ದಶಾವತಾರದ ಕ್ರಮಾನುಗತಿಯಲ್ಲಿ ವ್ಯತ್ಯಾಸವಿದೆ. ಕೂರ್ಮಾವತಾರ ಸಮುದ್ರಮಥನದಲ್ಲಿ ಉಂಟಾದುದು. ಆಗ ರಾಕ್ಷಸರ ನಾಯಕ ಬಲಿಚಕ್ರವರ್ತಿಯಾಗಿದ್ದ. ಆ ಬಲಿಯ ಪೂರ್ವಜನಾದ ಹಿರಣ್ಯಕಶಿಪುವನ್ನು ಸಂಹರಿಸಲು  ನರಸಿಂಹಾವತಾರವಾಗಿತ್ತು. ಹಾಗಾದರೆ ನರಸಿಂಹನ ಅನಂತರ ಕೂರ್ಮಾವತಾರ ಎಂದಂತಾಯಿತು! 
  4. ಆದರೆ ಬುದ್ಧಾವತಾರವನ್ನು ಕೃಷ್ಣನ ಅನಂತರದ ಅವತಾರವೆಂದೇ ತಿಳಿಯಬೇಕು. ಬಲರಾಮನು ಲಕ್ಷ್ಮಣನಂತೆ ಶೇಷನ ಅವತಾರ. ವಿಷ್ಣುವಿಗೆ ಹಯಗ್ರೀವ, ಕಪಿಲ ಮುಂತಾದ ಇತರ ಅವತಾರಗಳೂ ಇವೆ. ಅವುಗಳನ್ನು ದಶಾವತಾರದಲ್ಲಿ ಸೇರಿಸಿಲ್ಲ ಅಷ್ಟೆ. ವಿಶೇಷವಾದ ಲೀಲೆಗಳನ್ನು ತೋರಿದ ಅವತಾರಗಳಿಗೆ ಮಾತ್ರ ಪೂಜೆ. ದಶಾವತಾರದ ಪೂಜಾಮಂತ್ರಗಳಲ್ಲಿ ಹಾಗೂ ಶಿಲ್ಪಗಳಲ್ಲಿ ಎಲ್ಲ ಹತ್ತು ಅವತಾರಗಳಿಗೂ ಸ್ಥಾನವಿದೆ.
  5. ಇತಿಹಾಸದ ಬುದ್ಧನನ್ನು ವಿಷ್ಣುವಿನ ಅವತಾರವೆನ್ನಲಾಗದು. ತುಂಬಾ ಸುಲಭವಾಗಿ ಹೇಳಬೇಕೆಂದರೆ ಅವನು "ಬೆತ್ತಲೆ ನಿಂತ" ಬುದ್ಧನಲ್ಲ!

**

2. ಭ ರಾ ವಿಜಯಕುಮಾರ, ಸಾಹಿತಿ,ಕವಿ, ವಿದ್ಯಾರಣ್ಯಪುರ, ಬೆಂಗಳೂರು  

  1. ಯುಗಧರ್ಮ ಎಂಬ ಮಾತಿದೆ. ಇದಕ್ಕೆ ಯಾವ ದೇಶವೂ ಹೊರತಲ್ಲ. ಐರೋಪ್ಯ ದೇಶಗಳಲ್ಲಿ ಕ್ರಿಶ್ಚಿಯನ್ ಮತಗಳˌ ಪಕ್ಕದಲ್ಲೇ ಮುಸಲ್ಮಾನ ಧರ್ಮದೊಳಗಿನ ಬೇಧಗಳನ್ನು ನೋಡಿದರೆ ತಿಳಿಯುತ್ತದೆ. ಕನ್ನಡ ಸಾಹಿತ್ಯದ ಇತಿಹಾಸವನ್ನೂ ಧರ್ಮದ ಆಧಾರದಲ್ಲೇ ವಿಂಗಡಿಸಿದ್ದಾರೆ. 10 - 12 ಶತಮಾನ ಜೈನಯುಗˌ ನಂತರ ವೀರಶೈವ ಯುಗ 15ರವರೆಗೆˌ ನಂತರ ವೈಷ್ಣವ ಯುಗ ಎಂಬ ವಿಭಾಗ ಕ್ರಮವಿದೆ. ಆಳುವ ರಾಜರ ಪ್ರಭಾವ ಧರ್ಮ ಮತಗಳ ಮೇಲಿರುವುದನ್ನೂ ಎಲ್ಲೆಡೆ ಕಾಣುತ್ತೇವೆ. ಹಲವು ದೃಷ್ಟಿಕೋನಗಳಿಂದ ನೋಡುತ್ತಾ ಹೋಗಬಹುದು.
  2. ನಿಮ್ಮ ಅನುಮಾನ ನನಗೂ ಇದ್ದೇ ಇದೆ. ಆದರೆ ಸಧ್ಯದ ವಾದಗಳು ನಿರ್ಧಾರಕ್ಕೆ ಸಾಲದು. ಕೆಲವು ಊಹೆಗಳನ್ನು ಅಂದಾಜುಗಳನ್ನು ಮಾಡಬೇಕಾದೀತು. ಪುರಾಣಗಳಲ್ಲಿ ವಿರೋಧಗಳುˌ ಪ್ರಕ್ಷಿಪ್ತಗಳಿರುತ್ತವೆ. ಅನೇಕ ಅಭಿಪ್ರಾಯ ಭೇದಗಳಿವೆ. ವಿಷ್ಣುವಿನ ಇನ್ನೂ ಅನೇಕ ರೂಪಗಳಿವೆ. ಶ್ರೀನಿವಾಸನೂ ಸೇರಿದಂತೆ. ಆದರೆ ದಶಾವತಾರಕ್ಕೆ ಸೇರುವುದಿಲ್ಲ. ಅಲ್ಲದೆ ಅವತಾರಗಳ ಮೌಲ್ಯಗಳಲ್ಲೂ ವೆತ್ಯಾಸಗಳಿವೆ. ರಾಮನ ಮೌಲ್ಯ ಕೃಷ್ಣನಲ್ಲಿಲ್ಲ...ಹೀಗೆ. ಮತ್ತು ಪರಶುರಾಮˌರಾಮˌ ಕೃಷ್ಣ ರನ್ನು ಬಿಟ್ಟರೆ ಉಳಿದವು ಅಂಶಾವತಾರಗಳು. ಹೀಗೆ ಅನೇಕ ಚರ್ಚೆಯ ಅಂಶಗಳಿವೆ. ಆದರೂ ಮೌಲ್ಯ ಮಾನವೀಯತೆಗಳ ದೃಷ್ಟಿಯಿಂದ ಬುದ್ಧ ಮುಖ್ಯನೇ ಅಲ್ಲವೇ? ಯೋಚಿಸುತ್ತಿದ್ದರೆ ಇನ್ನೂ ಅನುಮಾನಗಳು ಬರಬಹುದು. ಇದು ನನ್ನ  ಅನಿಸಿಕೆ. 

**

3. ಶ್ರೀ ನರಹರಿ, ವಿದ್ವಾಂಸರು ‘ಬುದ್ಧಾವತಾರ’ ಕಾವ್ಯದ ಕರ್ತೃ 

  1. ನನ್ನ ಬುದ್ಧಾವತಾರ ಕಾವ್ಯ ಭಾಗದ ಮುನ್ನುಡಿಯಲ್ಲಿ ಈ ಕುರಿತು ಇನ್ನಷ್ಟು ಮಾಹಿತಿಗಳು ಇವೆ. ಶ್ರೀ ನಾರಾಯಣಾಚಾರ್ಯರು ತಮ್ಮ "ಬುದ್ಧ ಯಾರು?" ಗ್ರಂಥದಲ್ಲಿ,  ಮೂಲದಲ್ಲಿ ಬುದ್ಧ ಹೇಳಿದ್ದು ಬೇರೆ ಅನಂತರ ಅವನ ಅನುಯಾಯಿಗಳು ಹೇಳಿದ್ದೇ ಬೇರೆ ಎನ್ನು ತ್ತಾರೆ. ಶಂಕರರು ಮತ್ತು ಕುಮಾರಿಲಭಟ್ಟರು ಬೌದ್ಧ ಮತವನ್ನು ಖಂಡಿಸುವಾಗ "ಬುದ್ಧ ಹೇಳಿದ್ದು ಹಾಗಲ್ಲವಲ್ಲ,ನೀವು ಹೇಳುವುದೇ ಬೇರೆ" ಎಂದು ವಾದಿಗಳನ್ನು ಖಂಡಿಸುತ್ತಾರೆ. 
  2. ಚಿಂತನ ವಿಕಾಸದ ದೃಷ್ಟಿಯಿಂದ ಅವತಾರಗಳನ್ನು ವಿಶ್ಲೇಷಣೆ ಮಾಡಿದರೆ, ಕೆಲವು ತಿದ್ದುಪಡಿಗಳೊಂದಿಗೆ ಬುದ್ಧನನ್ನು ಅವತಾರವೆನ್ನಬಹುದು.
  3. ತ್ರಿಪುರಾಸುರ ಸಂಹಾರಕ್ಕೆ ಕ್ಷಣಿಕವಾಗಿ ನೆರವಾದ ಬೌದ್ಧ ರಾಮನ ನೈತಿಕ ಮತ್ತು ಕೃಷ್ಣನ ಧಾರ್ಮಿಕತೆಯನ್ನು ಮುಂದುವರೆಸಿದನೇ ?
  4. ಇನ್ನು ಸಾಂಪ್ರದಾಯಿಕವಾಗಿ ದೈವಕಾರ್ಯಾಚರಣೆಗಳ ಸಂಕಲ್ಪದಲ್ಲಿ ದೈವವನ್ನೊಪ್ಪದ ಬುದ್ಧನನ್ನು ಪ್ರಸ್ತಾಪಿಸುವುದೇ ?
  5. ಬೌದ್ಧಿಕವಾಗಿ ಬುದ್ಧನನ್ನು ಅವತಾರವಾಗಿ ಒಪ್ಫಿಕೊಳ್ಳುವುದಕ್ಕೂ, ಬಿಡಲಾರದ ಸಂಪ್ರದಾಯಕ್ಕೂ ವ್ಯತ್ಯಾಸವಿದೆ.
  6. ಬೌದ್ಧ ಅಸುರ ಸಂಹಾರಕ್ಕೆ ದೇವತೆಗಳಿಗೆ ನೆರವಾದ ಅವತಾರ, ಮಾನುಷಲೋಕಕ್ಕಲ್ಲವಲ್ಲ.
  7. ಅದು ಹೊರತು ಎಲ್ಲಾ ಅವತಾರಗಳೂ ಭೂಲೋಕಕ್ಕೆ ಸಂಬಂಧಿಸಿದವುಗಳೇ.

**

4. ಶ್ರೀ ಗುರುರಾಜ ಚಿಟಗುಪ್ಪಿ, ಸಂಗೀತ ವಿದ್ವಾಂಸರು, ಧಾರವಾಡ

ನನ್ನ  ಅನಿಸಿಕೆಯಂತೆ , ವಿಷ್ಣುವಿನ ದಶಾವತಾರಗಳಲ್ಲಿ ಬುಧ್ಧಾವತಾರ  ಗೌತಮಬುದ್ಧನಲ್ಲ. ಆ ಅವತಾರಕ್ಕೆ ಕಾರಣ ಪ್ರತಿಸಲದಂತೆ ದುಷ್ಟ ರಾಕ್ಷಸಸಂಹಾರ. ಅದು ಬ್ರಹ್ಮದೇವರ ವರದಿಂದ ಕೊಬ್ಬಿ ದುಷ್ಟ ಕಾರ್ಯಗಳಲ್ಲಿ ತೊಡಗಿದ ತ್ರಿಪುರಾಸುರನ  ಸಂಹಾರಕ್ಕಾಗಿ  ಆದ ಅವತಾರ. ಇದಕ್ಕೆ  ದಾಸ ಸಾಹಿತ್ಯದಲ್ಲಿ ಬೇಕಾದಷ್ಟು ಹಾಡುಗಳು ದೊರಕುತ್ತವೆ. ಶ್ರೀ ಜಗನ್ನಾಥದಾಸ ವಿರಚಿತ ಮೇರುಕೃತಿ  "ಹರಿಕಥಾಮೃತಸಾರ " ದಲ್ಲಿಯೂ ಇದರ ಪ್ರಸ್ತಾಪವಿದೆ. 

ನಾನು ಬರೆದ "ದಶಾವತಾರ" ಹಾಡಿನಲ್ಲಿ  ಅದನ್ನೇ ಧೃಡೀಕರಿಸಿದ್ದೇನೆ. ಇಷ್ಟು ವಿವರ ಸಾಕಾಗಬಹುದೆಂದು ಭಾವಿಸುತ್ತೇನೆ.

**

5. ಕವಿ ಶ್ರೀ ನಾಗರಾಜ್, ಸಾಹಿತಿ, ಕವಿ, ಹಾಸನ

ಒಳ್ಳೆಯ ವಿಶ್ಲೇಷಣೆ. ಜಿಜ್ಞಾಸುಗಳು ಪರಿಶೀಲಿಸಿ ಬೆಳಕು ಚೆಲ್ಲುವ ಅಗತ್ಯವಿದೆ. ಉತ್ತಮ ಅಧ್ಯಯನದ ಆಳದಿಂದ ಮೂಡಿಬಂದ ಲೇಖನ. ಧನ್ಯವಾದಗಳು, ಅಭಿನಂದನೆಗಳು.

***

Madan  Chitaguppi, Bengaluru

  1. Buddha propogated what he thought as reality. His many deciples; as usual is the case; mis-understood him. Spreading the borrowed knowledge of a realised Soul is dangerous and has been continuing till date. It applies to all religions.
  2. I strongly feel, that these selected Dashavatars have a specific meaning of the path in  evolution of a sadhak.


***

Unquote


Interested..? Please read

click-> ಮತ್ಸ್ಯ ಜಯಂತಿ click-> ಕೂರ್ಮ ಜಯಂತಿ

click-> ದಾಸರ ದೇವರನಾಮಗಳು (3000+ ಆಡಿಯೋ & 12000+ ದೇವರನಾಮ ಸಾಹಿತ್ಯ)



back to  

end.

No comments:

Post a Comment