CLICK --> ವಿವಾಹ ಸೂಕ್ತಮ್
ನೆನಪು
ನನ್ನ ಕೆಲಸದ ನಿಮಿತ್ತ ವಾಸವಾಗಿದ್ದ ಮೊದಲ ಊರು ಈ ರಾಣೆಬೆನ್ನೂರು. ಸ್ನೇಹಿತ ಶ್ರೀ ವೆಂಕಟೇಶ ಐರಣಿ ಯವರು ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ತಮ್ಮ ಹುಟ್ಟೂರಾದ ರಾಣೆಬೆನ್ನೂರಿನ ಟೆಲಿಫೋನ್ ಕಚೇರಿಯಲ್ಲಿ ಕೆಲಸಕ್ಕೆ ಆಗತಾನೆ ಬಂದಿದ್ದರು. ಶ್ರೀ ವೆಂಕಟೇಶ ಐರಣಿ ಯವರು ನನಗೆ ಪರಿಚಿತರಾದಾಗಿನಿಂದ ಆತ್ಮೀಯರೂ ಮತ್ತು ಹಿತೈಷಿಗಳು ಆಗಿದ್ದರು. ನಮ್ಮಿಬ್ಬರ ವಯಸ್ಸಿನಲ್ಲಿ ಬಹಳ ಅಂತರವಿದ್ದಾಗ್ಯೂ ಕೂಡ ಸ್ನೇಹದ ಬಾಂಧವ್ಯ ಗಾಢವಾಗೇ ಇತ್ತು. 1980ರಲ್ಲಿ ಈ ಪ್ರಸಂಗ ಅವರ ಮದುವೆಯ ದಿನ ನಡೆದಿದ್ದು ನನಗೆ ಇಂದಿಗೂ ನೆನಪಿನಲ್ಲಿದೆ.
ಹುಡುಗಿಯ ತಂದೆಯವರು ಹಾನಗಲ್ ಊರಿನವರಾಗಿದ್ದು ಮದುವೆಯನ್ನು ತಮ್ಮ ಸ್ವಂತ ಊರಿನಲ್ಲಿಯೇ ಏರ್ಪಡಿಸಿದ್ದರು. ಹುಡುಗನ ಕಡೆಯವರನ್ನು ಕರೆದುಕೊಂಡು ಹೋಗಲು ಒಂದು ಖಾಸಗೀ ಬಸ್ಸಿನ ವ್ಯವಸ್ಥೆಯನ್ನು ಮಾಡಿದ್ದರು. ಮದುವೆಯ ಹಿಂದಿನ ದಿನ ಮಧ್ಯಾನ್ಹ ಊಟ ಮುಗಿಸಿ ನಾವೆಲ್ಲ ಆ ಬಸ್ಸಿನಲ್ಲಿ ರಾಣೇಬೆನ್ನೂರಿನಿಂದ ಪ್ರಯಾಣ ಬೆಳಸಿ ಸಂಜೆ ಹಾನಗಲ್ ತಲುಪಿದಾಗ ನಮಗೆ ಹೆಣ್ಣಿನ ಕಡೆಯಿಂದ ಆದರದ ಸ್ವಾಗತ ಕಾದಿತ್ತು. ಹಾನಗಲ್ ಸಣ್ಣ ಊರಾಗಿದ್ದರಿಂದ ಬಹಳಷ್ಟು ಮನೆಯವರು ಮನೆಯಲ್ಲಿಯೇ ಮದುವೆಯ ಕಾರ್ಯಕ್ರಮ ನೆರವೇರಿಸುತ್ತಿದ್ದರು. ಕೆಲವರು ಸಿನಿಮಾ ಟಾಕೀಸ್ ನಲ್ಲಿ ಮದುವೆ ನಿಯೋಜಿಸುತ್ತಿದ್ದರು. ಛತ್ರಗಳೂ ಕೂಡ ಚಿಕ್ಕದು ಮತ್ತು ಒಂದೋ ಎರಡೋ ಇದ್ದವು. ಸ್ನೇಹಿತ ವೆಂಕಟೇಶ್ ರವರ ಮದುವೆಯನ್ನು ಹಾನಗಲ್ಲಿನ ಒಂದು ಛತ್ರದಲ್ಲಿ ನಿಯೋಜಿಸಲಾಗಿತ್ತು. ಛತ್ರದಲ್ಲಿ ರೂಮುಗಳು ಕಡಿಮೆ ಇದ್ದಿದ್ದರಿಂದ ಅಲ್ಲೇ ಅಕ್ಕ ಪಕ್ಕದವರ ಮನೆಗಳಲ್ಲಿ ನಮಗೆ ತಂಗುವ ವ್ಯವಸ್ಥೆಯನ್ನೂ ಸಹ ಮಾಡಿದ್ದರು.
ಸ್ನೇಹಿತ ವೆಂಕಟೇಶ್ ರವರ ತಂದೆ ಇಲ್ಲದ್ದರಿಂದ ಅವರ ಅಣ್ಣ ಅತ್ತಿಗೆಯವರೇ ಧಾರೆ ಎರದು ಕೂಡಬೇಕಿತ್ತು. ವೆಂಕಟೇಶ್ ರವರ ಅಣ್ಣ ತುಂಬಾ social ಆಗಿದ್ದು ಹಾಸ್ಯ ಮಾಡಿ ಎಲ್ಲರನ್ನು ರೇಗಿಸುತ್ತಿದ್ದರು. ಅವರಿಂದಲೇ ನಮ್ಮ ಬಸ್ ಪ್ರಯಾಣದ ದಾರಿ ಕೂಡ ಸಾಗಿದ್ದು ಗೊತ್ತಾಗದೇ ಬಹಳ ಖುಷಿ ತಂದಿತ್ತು. ಹಾಗೆಯೇ ಅವರಿಗೆ ರಮ್ಮಿ ಇಸ್ಪೇಟ್ ಆಟವೆಂದರೆ ಪಂಚಪ್ರಾಣ.
ಸಂಜೆಯ ಶಾಸ್ತ್ರ ಮುಗಿಸಿ ಊಟ ಮಾಡಿದ ಮೇಲೆ ಕೆಲವು ಸ್ನೇಹಿತರು ನಮ್ಮ ರೂಮಿನಲ್ಲಿ ರಮ್ಮಿ ಆಟ ಪ್ರಾರಂಭಿಸಿದರು. ಕೆಲಸಮಯದಲ್ಲೇ ವೆಂಕಟೇಶ್ ರವರ ಅಣ್ಣ ಕೂಡ ಬಂದು ಸೇರಿದ್ದರು. ನನಗೆ ಅಷ್ಟಾಗಿ ಆಟ ಗೊತ್ತಿರಲಿಲ್ಲ, ಆದ್ದರಿಂದ ಸುಮ್ಮನೆ ಆಟವನ್ನು ಗಮನಿಸುತ್ತಿದ್ದೆ. ನಂತರ ಆಟ ಬರದವರ ಜೊತೆಗೆ ಹೊರಗಡೆ ಸುತ್ತಾಡಿಕೊಂಡು ಬಂದು ನಿದ್ರೆ ಮಾಡೋಣ ಎಂದು ಯೋಚಿಸಿ ನಮ್ಮ ಕೋಣೆಗೆ ಬಂದಾಗ ರಮ್ಮೀ ಆಟ ಭರದಿಂದ ಸಾಗಿತ್ತು. ಆಗಲೇ ಸಮಯ 11ರ ಸುಮಾರು. ಆಗ ವೆಂಕಟೇಶ್ ರವರ ತಾಯಿಯವರು ಬಂದು ಎಲ್ಲರನ್ನು ಬೈದು ಆಟವನ್ನು ನಿಲ್ಲಿಸಿದರು. ದೊಡ್ಡವರ ಮಾತು ಕೇಳಲೇ ಬೇಕಾಗಿದ್ದರಿಂದ ಆಟವನ್ನು ಅಲ್ಲಿಗೇ ನಿಲ್ಲಿಸಿ ಬೆಳಿಗ್ಗೆ ಎಂಟು ಗಂಟಿಗೆ ಛತ್ರದಲ್ಲಿರುವ ಒಂದು ನಿಗದಿತ ರೂಮಿನಲ್ಲಿ ಆಟ ಮುಂದುವರೆಸಲು ನಿರ್ಧರಿಸಿದರು.
ಆಟದ ಹುಚ್ಚು ಬಿಟ್ಟಿಲ್ಲದ್ದರಿಂದ ಎಲ್ಲಾ ಆಟಗಾರರು ಬೆಳಿಗ್ಗೆ ಸುಮಾರು 8 ಗಂಟೆಗೆ ಛತ್ರಕ್ಕೆ ಬಂದು ಅಲ್ಲಿಯೇ ಒಂದು ರೂಮಿನಲ್ಲಿ ಮತ್ತೆ ಆಟ ಪ್ರಾರಂಬಿಸಿದರು. ಮುಹೂರ್ತ ಸುಮಾರು 10 ಗಂಟೆಗೆ ಇತ್ತು. ನಾನು ಮತ್ತು ನನ್ನ ಸ್ನೇಹಿತರು ಬೆಳಿಗ್ಗೆ ಸರಿಯಾಗಿ ಒಂಬತ್ತುವರೆಗೆ ಮದುವೆಯ ಮಂಟಪಕ್ಕೆ ಬಂದು ಮುಹೂರ್ತದ ಸಮಯಕ್ಕೆ ಕಾಯುತ್ತಿದ್ದೆವು.
ಧಾರೆಯ ಮುಹೂರ್ತ ಹತ್ತಿರವಾಗುತ್ತಿದ್ದಂತೆ ಪುರೋಹಿತರು 'ಸುಮುಹೂರ್ತೆ ಸಾವಧಾನ' ಎಂದು ಹೇಳುತ್ತಿದ್ದಾಗ ವೆಂಕಟೇಶ್ ರವರ ಅತ್ತಿಗೆಗೆ ತಮ್ಮ ಪತಿ ಇಲ್ಲದ್ದು ಮನವರಿಕೆಯಾಯಿತು. ಕೂಡಲೇ ಅವರಿಗಾಗಿ ಹುಡುಕಲು ಪ್ರಾರಂಭಿಸಿ, ಕೆಲ ಸಮಯದ ನಂತರ ಛತ್ರದಲ್ಲಿದ್ದ ಸ್ನೇಹಿತರ ಆಟದ ರೂಮಿಗೆ ಅತ್ತಿಗೆಯವರನ್ನು ಕರೆದೊಯ್ದರು. ನಾನೂ ಕೂಡ ಅವರ ಜೊತೆಯಲ್ಲೇ ಆಟದ ರೂಮಿಗೆ ಬಂದಾಗ ನೋಡಿದ್ದು ವೆಂಕಟೇಶ್ ರವರ ಅಣ್ಣ ಆರಾಮವಾಗಿ ಆಟ ಆಡುತ್ತಿದ್ದರು. ಬಹುಶಃ ಬೆಳಗ್ಗೆ ಬೇಗ ರೆಡಿಯಾಗಿ ಕೆಲವು ಶಾಸ್ರಗಳಲ್ಲಿ ಭಾಗಿಯಾಗಿ ಮತ್ತೆ ರಮ್ಮಿ ಆಡಲು ಓಡಿ ಬಂದಿದ್ದರು.
ವೆಂಕಟೇಶ್ ರವರ ಅತ್ತಿಗೆ "ಏನ್ರೀ ಅಕ್ಕಿಕಾಳು ಸಮಯ (ಧಾರೆಯ ಸಮಯ) ಹತ್ತಿರವಾಗ್ತಿದೆ. ನೀವು ಇನ್ನೂ ಇಲ್ಲೇ ಇದ್ದೀರಾ. ಪುರೋಹಿತರು 'ಸುಮುಹೂರ್ತೆ ಸಾವಧಾನ' ಎಂದು ಹೇಳುತ್ತಲೇ ಇದ್ದಾರೆ, ನಿಮಗೆ ಸ್ವಲ್ಪವಾದರೂ ಬುದ್ದಿ ಇರಬೇಡವೆ" ಎಂದು ಕೋಪದ ನುಡಿಗಳನ್ನು ಆಡುತ್ತಿದ್ದಾಗ ಅವರ ಯಜಮಾನರು ಸ್ವಲ್ಪವೂ ವಿಚಲಿತರಾಗದೆ ಮತ್ತು ತಲೆ ಕೆಡಿಸಿಕೊಳ್ಳದೆ "ಪುರೋಹಿತರಿಗೆ 'ಸುಮುಹೂರ್ತೆ ಸಾವಧಾನ' ಮಂತ್ರವನ್ನು ಇನ್ನೂ ಸ್ವಲ್ಪ ಹೊತ್ತು ಸಾವಧಾನದಿಂದ ಹೇಳಲು ಹೇಳು. ಈಗ ನಾನು ಇಲ್ಲಿ 'ಗೆಲ್ಲುವ ಮುಹೂರ್ತ' ದಲ್ಲಿ ಇದ್ದೇನೆ. ಒಂದೆರಡು ನಿಮಿಷದಲ್ಲಿ show ಮಾಡಿ ಬಂದು ಬಿಡುತ್ತೇನೆ" ಎಂದು ಹೇಳಿ ಎಲ್ಲರನ್ನೂ ನಗುವೆಡೆಗೆ ಕೊಂಡಯ್ದದ್ದು ನನಗೆ ಇನ್ನೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
end- written ಸಂಟೈಮ್ ಇನ್ 2002
end.
.
No comments:
Post a Comment