Monday, 30 November 2020

ಟೈರ್ ಚಪ್ಪಲಿ tyre slippers sandals



ನೆನಪು

ಆರ್. ಗಣೇಶಪ್ರಸಾದ್ ಇಂದಿಗೂ ನನ್ನ ಆತ್ಮೀಯ ಸ್ನೇಹಿತನಾಗಿದ್ದಾನೆ. 1970 ರಿಂದ ಅವನ ಜೊತೆ ಒಡನಾಟವಿತ್ತು. ಹೈಸ್ಕೂಲಿನಲ್ಲಿ ನಾನು ಕುಳಿತುಕೊಳ್ಳುತ್ತಿದ್ದ ಬೆಂಚಿನ ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದನು. ಯಾಕೋ ಮೊದಮೊದಲು ಅವನ ಹತ್ತಿರ ಮಾತೇ ಆಡುತ್ತಿರಲಿಲ್ಲ. ಕಾರಣ ಕೂಡ ನೆನಪಿಲ್ಲ. ಇವನ ಬೆಂಚಿನ ಉಳಿದ ಸಹಪಾಠಿಗಳು ಈ ವಿಷಯ ತಿಳಿದು ನಮ್ಮಿಬ್ಬರಿಗೆ ಕೈಕುಲುಕಿಸಿದ್ದರು. ಅವತ್ತಿನಿಂದ ನಾವಿಬ್ಬರೂ ಒಟ್ಟಿಗೇ ಸ್ಕೂಲಿನಿಂದ ಮನೆಗೆ ಬರುತ್ತಿದ್ದೆವು. ನನ್ನ ಮನೆ ಸಿಗುವ  ಮುಂಚೆ ಅವನ ಮನೆ ಸಿಗುತ್ತಿತ್ತು. ಒಂದೆರಡು ದಿನದ ನಂತರ ನಾವಿಬ್ಬರೂ ಸಂಜೆಯ ಹೊತ್ತಿನಲ್ಲಿ ಮುಖ್ಯ ಮಾರುಕಟ್ಟೆಯ ಕಡೆಗೆ ಹೋಗಿ ತಿರುಗಾಡಿ ಬರಲು ಗಣೇಶ ನನ್ನನ್ನು ಆಮಂತ್ರಿಸಿದ. ಮುಖ್ಯ ಮಾರುಕಟ್ಟೆ ನನ್ನ ಮನೆಯಿಂದ ಸುಮಾರು ಎರಡೂವರೆಯಿಂದ ಮೂರು ಕಿಲೋಮೀಟರ್ ದೂರದಲ್ಲಿದೆ. ಎಷ್ಟು ಹೊತ್ತಿಗೆ ಹೊರಡುವುದು ಎನ್ನುವುದನ್ನು ಶಾಲೆಯಲ್ಲಿಯೇ ಸಮಯ ನಿರ್ಧಾರ ಮಾಡಿಕೊಳ್ಳುತ್ತಿದ್ದೆವು. ಅಂದಿನಿಂದ ನಮ್ಮಿಬ್ಬರ ಸಾಯಂಕಾಲದ ವಾಕಿಂಗ್ ಪ್ರಾರಂಭವಾಯಿತು.    

ಶಾಲೆಯಿಂದ ಮನೆಗೆ ಬಂದಮೇಲೆ ಮುಖ ತೊಳೆದು ಬಟ್ಟೆ ಬದಲಾಯಿಸಿ ನಾನು ಪ್ರತಿದಿನ ಗಣೇಶನ ಮನೆಗೆ ಸಂಜೆ ಹೋಗುವುದು. "ಗಣೇಶಾ" ಅಂತ ಕರೆದಾಗ "ಬಂದೆ" ಎಂದು ಹೇಳಿ ಹೊರಗೆ ಬರುತ್ತಿದ್ದನು. ಅವನು ಹೊರಡಲು ಸಿದ್ಧವಾಗಿಲ್ಲದಿದ್ದರೆ ಅವನ ತಾಯಿ ನನ್ನನ್ನು ಮನೆಯ ಒಳಗೆ ಕರೆದು ಕೂಡಿಸುತ್ತಿದ್ದರು. ಎಲ್ಲ ಮನೆಗಳಲ್ಲಿ ಇರುವ ಹಾಗೆ ಅವರ ಅಮ್ಮ ನನ್ನ ಬಗ್ಗೆ ಎಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದರು.  ಇವನು ಸಿದ್ದವಾಗಿ ಬಂದ ಮೇಲೆ ನಾವಿಬ್ಬರೂ ತಿರುಗಾಡಲು ಪ್ರಾರಂಭ.

ಸುಮ್ಮನೆ ನಡೆದುಕೊಂಡು ಸಿಟಿ ಕಡೆಗೆ ಹೋಗುವುದು. ಎಲ್ಲಿಗೆ ಎನ್ನುವ ಗುರಿಯಿರಲಿಲ್ಲ. ಕೆಲವು ದಿನಗಳಲ್ಲಿ ಗಣೇಶನ ಆಪ್ತ ಸ್ನೇಹಿತ ಅನಂತಶಯನ ಕೂಡ ನಮ್ಮ ಜೊತೆ ಇರುತ್ತಿದ್ದನು. ಹಾಗೆಯೇ ಗಣೇಶನ ಸ್ನೇಹಿತ ರಾಜಶೇಖರ ನಮ್ಮ ಜೊತೆ ಬಂದಿರುವುದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಪ್ರತಿದಿನವೂ ಹೀಗೆ ಸುಮ್ಮನೆ ತಿರುಗಾಡುವುದು.  ಏನೂ ಕೆಲಸ ಇಲ್ಲಾ, ಸುಮ್ಮನೇ ನಡೆಯುತ್ತಾ ಹೋಗುವುದು. ಹೋಗುತ್ತಿರುವ ದಾರಿಯಲ್ಲಿ ಅಂದರೆ ಗಾಯತ್ರಿ ಟಾಕೀಸ್ ಪಕ್ಕದಲ್ಲಿ ಇರುವ ಒಂದು ಚಪ್ಪಲಿ ಅಂಗಡಿ ತೋರಿಸಿ ಗಣೇಶ ತಾನು  ಹಾಕಿಕೊಂಡಿರುವ ಚಪ್ಪಲಿಯನ್ನು ತೋರಿಸುತ್ತಿದ್ದನು. ಮತ್ತೆ ಬಹಳ ಕಡಿಮೆ ಬೆಲೆ ಅಂತಾ ಬೇರೆ ಹೇಳುತ್ತಿದ್ದನು.  ಇವನೇ ಆ ಅಂಗಡಿಯ ಮಾರಾಟಗಾರನ ತರಹ. ಇನ್ನು ಇವನ ಜೊತೆಗೆ ದಿನಾಲು ಸಿಟಿ ತನಕ ನಡೆದು ಹೋಗಬೇಕು. ಚಪ್ಪಲಿ ಗಟ್ಟಿ ಇರಬೇಕು ಅನ್ನೋ ಯೋಚನೆ ನನಗಾಗಲೇ ಮನದಲ್ಲಿ ಮೂಡಿತ್ತು. ಇವನ salesmanship ಇಂದ ಕೂಡ ನಾನೂ ಪ್ರಭಾವಿತನಾಗಿದ್ದೆನು.  

ಅಂತೂ ಒಂದು ದಿನ ಗಟ್ಟಿ ಮನಸ್ಸು ಮಾಡಿ ಒಂದು ಜೊತೆ ಟೈರ್ ಚಪ್ಪಲಿಯನ್ನು ಕೊಂಡಿದ್ದೂ ಆಯಿತು. ಬಹಳ ಖುಷಿಯಿಂದಲೇ ಮನೆಗೆ ಬಂದೆನು. ಮಾರನೆಯ  ದಿನ ಹೊಸ ಚಪ್ಪಲಿ ಹಾಕಿ ಶಾಲೆಗೆ ಹೋದೆನು. ಆದರೆ ಯಾಕೋ ಚಪ್ಪಲಿ ಹಾಕಿಕೊಂಡಾಗ ಕಾಲು ತುಂಬಾ ಭಾರ ಅಂತ ಅನ್ನಿಸುತ್ತಾ ಇತ್ತು. ಗಣೇಶನಿಗೆ ಹೇಳೂ ಬಿಟ್ಟೆ.  ಅದಕ್ಕೆ ಅವನು "ಯೋಚನೆ ಮಾಡಬೇಡ ಅಭ್ಯಾಸದ ಅವಶ್ಯಕತೆ ಇದೆ ಅಷ್ಟೇ.  ನೋಡು ನಾನು ಯಾವಾಗ್ಲೂ ಅದೇ ಚಪ್ಪಲಿ ಹಾಕ್ಕೊಳ್ಳೋದು"  ಅಂತ ಸಾಂತ್ವನ ಮಾಡಿದ್ದ ನೆನಪು ನನಗಿದೆ.  ಆ ಚಪ್ಪಲಿ ಹಾಕೊಂಡ್ರೆ ಗಣೇಶನ ಸಾಂತ್ವನವೇ ನೆನಪಿಸಿಕೊಂಡು ಕಾಲು ಭಾರವಾದರೂ ನಡೆಯುತ್ತಿದ್ದೆನು.  ದಿನಗಳೆದಂತೆ ಚಪ್ಪಲಿ ಹೇಗೋ adjust ಆಯಿತು. ನನಗೆ ಮುಂದಿನ ಎರಡು ವರ್ಷ ಬೇರೆ ಚಪ್ಪಲಿ ಕೊಂಡುಕೊಳ್ಳೋದು ಸಹ ನಿಂತುಹೋಯಿತು. ಗಣೇಶ ವಿಜ್ಞಾನ ವಿಭಾಗ ಆರಿಸಿಕೊಂಡು PUC ಸೇರಿ ನನ್ನ ಜೊತೆ ತಪ್ಪಿದರೂ ಅವನ ಶಿಫಾರಸಿನ ಚಪ್ಪಲಿ ಮಾತ್ರ ನನ್ನ ಜೊತೆ ಬಿಡಲಿಲ್ಲ ಮತ್ತು ಸವೆಯಲೇ ಇಲ್ಲ.

end- written ಸಂಟೈಂ ಇನ್ August 2020
 
.
back to  

end.

.

No comments:

Post a Comment