Monday 30 November 2020

ಅಪ್ಪನ ಟೋಪಿ appana topi father's cap

ನೆನಪು
ಈ ಪ್ರಕರಣ ನಡೆದು ೫೦ ವರುಷಗಳ ಮೇಲೆ ಆಗಿದೆ.   ನಾನಿನ್ನೂ ತುಂಬಾ ಚಿಕ್ಕವನಿದ್ದೆ.  ಆದರೂ ಕೆಲವು ಸನ್ನಿವೇಶಗಳು ನಮ್ಮ  ಮನಸ್ಸಿನಲ್ಲಿ ಬೇರೂರಲ್ಪಡುತ್ತವೆ.  ಈ ಪ್ರಸಂಗವೂ ಹಾಗೆಯೇ.

ನನ್ನ ಅಕ್ಕ ಸುಧಾಳ  ಮದುವೆ ಗೊತ್ತಾಗಿ ೧೯೬೯ ರಲ್ಲಿ ಮೈಸೂರಿನಲ್ಲಿ ಅಗ್ರಹಾರದಲ್ಲಿರುವ 'ಕಲ್ಯಾಣ ಭವನ' ಛತ್ರದಲ್ಲಿ ನೆರವೇರಿಸಿದರು.  ನಾವೆಲ್ಲ ಚಿಕ್ಕವರಾಗಿದ್ದರಿಂದ ಎಲ್ಲಾ ಕೆಲಸಗಳ ತಯಾರಿ ನಮ್ಮ ತಂದೆ ಒಬ್ಬರೇ ಮಾಡಿದ್ದರು. 

ಅಂತೂ ವರಪೂಜೆಯ ದಿನ ಬೆಳಿಗ್ಗೆ ಬೇಗನೇ ನಾವೆಲ್ಲ ಛತ್ರಕ್ಕೆ ಹೋಗಿದ್ದೆವು. ನಂತರ ಮಧ್ಯಾನ್ಹದ ಊಟ ಮುಗಿದ ಮೇಲೆ ನಮ್ಮ ತಂದೆಯವರು ಛತ್ರದಿಂದ ಪರಾರಿ!  ಸಂಜೆ ನಾಲ್ಕು ಗಂಟೆಯ ವೇಳೆ 'ಅಪ್ಪ ಎಲ್ಲಿ' ಎಂದು ನಾವೆಲ್ಲ ಕೇಳಿದಾಗ ಅವರ ಹುಡುಕುವ ಪ್ರಯತ್ನ ಪ್ರಾರಂಭವಾಯ್ತು.  ಎಲ್ಲಿ ಹುಡುಕಿದರೂ ಸಿಗುತ್ತಿಲ್ಲ.  ಮನೆಯ ಬೀಗದಕೈ ಅಮ್ಮನ ಹತ್ತಿರ ಇದ್ದಿದ್ದರಿಂದ ಅಪ್ಪ ಮನೆಯ ಕಡೆಗೆ ಹೋಗಿರಲ್ಲ ಎಂಬುದು ಖಾತ್ರಿ ಆಯ್ತು.  ಈಗ ಎಲ್ಲರಿಗೂ ಭಯ ಮತ್ತೆ ಹೆಚ್ಚಾಯಿತು.  ಅರ್ಧ ಗಂಟೆಯ ನಂತರ, ಅಂದರೆ ಸುಮಾರು  ನಾಲ್ಕುವರೆ ಗಂಟೆಗೆ ಅಪ್ಪ ನಡದೇ ಬಂದರು.  ಅವರು ಯಾರಿಗೂ ಹೇಳದೇ ನಡೆದುಕೊಂಡು ಒಂದೂವರೆ ಆಣೆ ಗಲ್ಲಿಯ ಕಡೆಗೆ ಹೋಗಿದ್ದಾರೆ. ಒಂದೂವರೆ ಆಣೆ ಗಲ್ಲಿ, ಛತ್ರದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದೆ. 

ಅಮ್ಮ ನಿಟ್ಟಿಸುರು ಬಿಟ್ಟರೂ ಅಮ್ಮನ ಮುಖದಲ್ಲಿ ಸಂತೋಷ  ಹಾಗೂ ಕೋಪ ಎರಡೂ ಕಾಣಿಸಿಕೊಂಡಿತು.  ಎಲ್ಲರೂ ಎಲ್ಲಿಗೆ ಹೋಗಿದ್ದೆ ಎಂದು ಅಪ್ಪನನ್ನು ಕೇಳಿದಾಗ ಮುಗ್ಧ ಅಪ್ಪ ಹೇಳಿದ್ದು ಹೀಗೆ.  'ನನ್ನ ಕಪ್ಪು ಟೋಪಿ ಸ್ವಲ್ಪ ಹಳೆಯದಾಗಿದೆ, ಅದಕ್ಕೆ ಹೊಸ ಟೋಪಿ ಒಂದೂವರೆ ಆಣೆ ಗಲ್ಲಿಯಿಂದ ತರಲು ಹೋಗಿದ್ದೆ'.  ಎಲ್ಲರಿಗೂ ಆತಂಕವಿದ್ದಿದ್ದರಿಂದ, ಏಕೆ ನಡೆದು ಹೋಗಬೇಕಿತ್ತು, ಮತ್ತು ಟೋಪಿ ತರುವುದು ಈ ಸಮಯದಲ್ಲಿ ಮುಖ್ಯನಾ ಎಂದೆಲ್ಲ ಪ್ರಶ್ನೆಗಳ ಸುರಿಮಳೆಯಾಯ್ತು.  ಸಧ್ಯ, ವರಪೂಜೆ ಸಮಯಕ್ಕೆ ಮುಂಚೆ ಇದ್ದಾರಲ್ಲ ಎಂದು ಎಲ್ಲರೂ ಸಮಾಧಾನ ಮಾಡಿಕೊಂಡರು.

ಆಗ ನನಗೆ ಏನೂ ಆತಂಕದ ಭಾವನೆ ಮೂಡಿರಲಿಲ್ಲ, ಏನೂ ಗೊತ್ತಾಗಲೂ ಇಲ್ಲ.  ಈಗ ಯೋಚಿಸಿದರೆ ನನಗೆ ಅನಿಸಿದ್ದು ಹೀಗೆ.  

ತುಂಬಾ ಸರಳ ಸ್ವಭಾವದ ಅಪ್ಪ ಏನನ್ನೂ ತನಗೋಸ್ಕರ ಕೇಳಿದವರೇ ಅಲ್ಲ. ಒಂದೇ ಒಂದು ಬಟ್ಟೆ ಅಥವಾ ಚಪ್ಪಲಿ ಏನೂ ಅವರಾಗಿಯೇ ಕೊಂಡಿದ್ದು ನಾವ್ಯಾರೂ ನೋಡೇ ಇಲ್ಲ. ಮೈಸೂರು ವಿಶ್ವವಿದ್ಯಾನಿಲಯದ ಲೈಬ್ರರಿಗೆ ಹೋಗಿ ನಾಲ್ಕು ಪುಸ್ತಕಗಳನ್ನು ತಂದು ಹದಿನೈದು ದಿನಗಳಲ್ಲಿ  ಓದಿ ಮುಗಿಸಿ, ಟಿಪ್ಪಣಿ ಬರೆದು ಮತ್ತೇ ಲೈಬ್ರರಿಗೆ ಹೋಗಿ ೪ ಪುಸ್ತಕಗಳನ್ನು ತರುವುದೊಂದೇ  ಅವರಿಗಿದ್ದ ಹವ್ಯಾಸ. 

ಅಪ್ಪನ ಪಂಚೆ ಮತ್ತು ಅಂಗಿಯ ಬಟ್ಟೆಯನ್ನೂ  ಸಹ ಅಮ್ಮನೇ ಅಥವಾ ಅಕ್ಕನೇ ತಂದು ಹಳೆಯ ಜುಬ್ಬಾ ಅಳತೆ ಕೊಟ್ಟು ಹೊಲಿಸುತ್ತಿದ್ದರು.  ಆದರೆ  ಮದುವೆಗೆ ಹೊಸ ಟೋಪಿ ಕೊಳ್ಳಲು ಅಮ್ಮ ಮರೆತಿದ್ದರು.  ಬೀಗರ ಮುಂದೆ ಮದುವೆಯ ಸಮಯದಲ್ಲಿ ಹೊಸ ಟೋಪಿ ಇದ್ದರೆ ಒಳಿತು ಎಂದು ಭಾವಿಸಿ ಒಂದೂವರೆ ಆಣೆ ಗಲ್ಲಿಗೆ ಒಬ್ಬರೇ ನಡೆದು ಹೋಗಿ ಹೊಸ ಟೋಪಿ ಖರೀದಿಸಿದ್ದರು. ನಡೆದು ಏಕೆ ಹೋಗಿದ್ದರೆಂದರೆ ಟೋಪಿಯ ಬೆಲೆ ತುಂಬಾ ಕಡಿಮೆ, ಬಸ್ಸಿನ ಟಿಕೆಟ್ ಖರ್ಚು ಬೇರೆ ಇದಕ್ಕೆ ಏಕೆ ಎಂದು ಯೋಚಿಸಿರಬೇಕು. ಈ ಟೋಪಿ ತಮಗಾಗಿ ಅಲ್ಲದಿದ್ದರೂ ಇತರರ ಮುಂದೆ ತನ್ನ ಹಳೆಯ ಟೋಪಿಯಿಂದ ನಮ್ಮೆಲ್ಲರ ಪ್ರತಿಷ್ಠೆ ಕಡಿಮೆಯಾಗದಿರಲಿ ಎಂದು ಈ ನಿರ್ಧಾರ ತೆಗೆದುಕೊಂಡಿದ್ದರಬೇಕಲ್ಲವೇ?
end- written ಸಂಟೈಂ ಇನ್ August 2020

.
back to  

end.

.

No comments:

Post a Comment