very easy way to forget all pains😀😃
ನೆನಪು
ಕೆಲವು ಘಟನೆಗಳನ್ನು ಎಷ್ಟು ಮರೆಯಲು ಯತ್ನಿಸಿದರೂ ಮರೆಯಲಾಗುವುದಿಲ್ಲ. ಯಾಕೆಂದರೆ ಈ ಘಟನೆಗಳು ಮನಸ್ಸಿನ ಮೇಲೆ ಅತೀವವಾಗಿ ಪರಿಣಾಮ ಬೀರಿರುತ್ತದೆ. ಈ ಘಟನೆಗಳು ಎರಡು ವಿಷಯಗಳಿಗೆ ಸ್ಮಬಂಧಪಟ್ಟಿರುತ್ತವೆಯೆಂದು ನನ್ನ ಅನಿಸಿಕೆ. ಒಂದು ಅತಿ ಸಂತೋಷ ತರುವ ವಿಷಯ, ಇನ್ನೊಂದು ಅತಿ ದುಃಖಕೊಡುವ ಘಟನೆ. ಇಲ್ಲಿ ನಾನು ಹೇಳುವುದು ನನಗೆ ಅತಿ ಬೇಸರ ಹಾಗೂ ದುಃಖ ತಂದಂತಹದು.
2010ರಲ್ಲಿ ನನ್ನ ಜೀವನದಲ್ಲಿ ಮೊದಲ ಬಾರಿಗೆ ನನಗೆ ದವಡೆ ಹಲ್ಲು ನೋವು ಬಂದಾಗ ಮನೆಯ ಹತ್ತಿರವಿದ್ದ ಹಲ್ಲಿನ ಡಾಕ್ಟರ್ (dentist) ಹತ್ತಿರ ಹೋದೆ. ಡಾಕ್ಟರ್ ನನ್ನ ಹಲ್ಲನ್ನು ಪರೀಕ್ಷಿಸುತ್ತಾ ನನ್ನ ತಿಂಗಳ ಆದಾಯ ಎಷ್ಟು ಇರಬಹುದೆಂದು ತಿಳಿಯಲು ಎಲ್ಲಾ ಕರಾಮತ್ತು ಮಾಡಿದರು. ಎಲ್ಲಾ ಡಾಕ್ಟರ್ ಗಳ ಚಾಳಿ ನಾನು ಮೊದಲೇ ಊಹಿಸಿದ್ದರಿಂದ ಹಳೇ ಪ್ಯಾಂಟ್ ಹಳೆ ಶರ್ಟ್ ಹಾಕಿ ಕ್ಲೀನಿಕ್ ಗೆ ಹೋಗಿದ್ದೆ. ಹುಳುಕು ಕಾಣಿಸುತ್ತಿಲ್ಲ ಎಂದು ಡಾಕ್ಟರ್ ಅಭಿಪ್ರಾಯ ಪಟ್ಟರು ಮತ್ತು 4 ದಿನಗಳಿಗೆ ಆಗುವಷ್ಟು antibiotic ಮಾತ್ರೆ 250mgದು ಬರೆದುಕೊಟ್ಟರು. ಪಕ್ಕದಲ್ಲೇ ಇದ್ದ ಮೆಡಿಕಲ್ ಶಾಪ್ ನಲ್ಲಿ ಮಾತ್ರೆ ಖರೀದಿಸಿ ಮನೆಗೆ ಬಂದು ನಿಟ್ಟಿಸುರು ಬಿಟ್ಟೆ. ನಾಲ್ಕು ದಿನಗಳ ನಂತರವೂ ನೋವು ಕಡಿಮೆ ಆದದ್ದು ಕಾಣಲಿಲ್ಲ. ಮತ್ತೆ ಅದೇ ಡಾಕ್ಟರ್ ಹತ್ತಿರ ಹೋದಾಗ xray ತೆಗೆದು ನೋಡೋಣ ಎಂದು ಹೇಳಿ xray ತೆಗೆದರು. xrayಯಲ್ಲಿ ಯಾವ ಹುಳುಕು ತೋರಿಸುತ್ತಿಲ್ಲ ಎಂದು ಹೇಳಿ ಇನ್ನೂ ಸ್ಟ್ರಾಂಗ್ ಮಾತ್ರೆ ಮೂರು ದಿನಗಳಿಗೆ ಬರೆದುಕೊಟ್ಟರು. ಹಲ್ಲು ಕಿಳಿಸುವ ಪ್ರಶ್ನೆ ಬಂದರೂ ಯಾಕೋ ಡಾಕ್ಟರನ್ನು ಕೇಳಲಿಲ್ಲ. ಮತ್ತೇ xrayಯಲ್ಲಿ ಹಲ್ಲು ಹುಳುಕು ಕಂಡಿಲ್ಲ. ಮಾತ್ರೆಯ ಪ್ರಭಾವದಿಂದ ನೋವು ಸ್ವಲ್ಪ ಕಡಿಮೆ ಎಂದೆನಿಸಿದರೂ ಸ್ವಲ್ಪ ಸ್ವಲ್ಪ ನೋವು ಇತ್ತು. ಒಂದು ವಾರದ ನಂತರ ಹಲ್ಲು ನೋವು ಮತ್ತೆ ಪ್ರಾರಂಭವಾಗಿ ತುಂಬಾ ಹೆಚ್ಚಾಗತೊಡಗಿತು. ಮಾತ್ರೆ ಮುಗಿದಿದ್ದರಿಂದ ಈಗ ನೋವು ಜಾಸ್ತಿ ಆಗುತ್ತಾ ಹೋಯಿತು. ನನ್ನ ಗಲ್ಲ ಸ್ವಲ್ಪ ಕಂಪನ ಮಾಡಲು ಆರಂಭವಾಯಿತು. ಬೇರೆ ದಾರಿ ಕಾಣದೆ ಮತ್ತದೇ ಡಾಕ್ಟರ್ ಹತ್ತಿರ ಹೋದೆ ಮತ್ತು ನೋವು ಹೆಚ್ಚಾಗಿದ್ದು ಹೇಳಿ ಗಲ್ಲ ಕಂಪನ ಪ್ರಾರಂಭವಾಗಿದೆ ಎಂದೆ. ಅದಕ್ಕೆ ಅವರು ಇದು ಹಲ್ಲಿನ ಸಮಸ್ಯೆಯೇ ಅಲ್ಲ, ಯಾವುದಾದರೂ ನರಗಳ ಸ್ಪೆಶಾಲಿಸ್ಟ್ ಹತ್ತಿರ ತೋರಿಸಿ ಎಂದುಬಿಟ್ಟರು. ದಾರಿ ಕಾಣದೆ ಮತ್ತೆ ಮನೆಗೆ ಬಂದೆ. ಎಲ್ಲ ನಡೆದದ್ದನ್ನು ಮನೆಯಲ್ಲಿ ಹೇಳಿದೆ. ನಾನು ಊಟ ಕೂಡ ಬಹಳ ಕಷ್ಟದಿಂದ ಮಾಡುತ್ತಿದ್ದದ್ದನ್ನು ನೋಡಿ ನನ್ನ ಹೆಂಡತಿ ಮತ್ತು ನಮ್ಮ ಮಗಳು ಬಹಳ ಹೆದರಿಬಿಟ್ಟರು. ಮಾರನೆಯ ದಿನ ಕೂಡಲೇ ಒಳ್ಳೆಯ (?) ನರ ಸ್ಪೆಶಾಲಿಸ್ಟ್ ಸರ್ಜನ್ ಹತ್ತಿರ ನನ್ನ ಮಗಳು ಅವಳ ಸ್ಕೂಟ್ಟರ್ ನಲ್ಲಿ ಕರೆದೊಯ್ದಳು. ಡಾಕ್ಟರ್ ಗೆ ನನ್ನ ಹಲ್ಲಿನ ಡಾಕ್ಟರ್ ಹತ್ತಿರ ನಡೆದದ್ದನ್ನು ವಿವರವಾಗಿ ಹೇಳಿದೆ. ನನ್ನನ್ನು ನೋಡಿ ಪರೀಕ್ಷಿಸಿದ ಡಾಕ್ಟರ್ ಕೂಡಲೇ ಹೇಳಿಬಿಟ್ಟರು. ಇದು ನರದ ಪ್ರಾಬ್ಲೆಮ್, ಮತ್ತು ಎಂದೂ ಹೋಗದ ಖಾಯಿಲೆ. ಮಾತ್ರೆಯನ್ನು ಪ್ರತಿನಿತ್ಯ ತೆಗೆದುಕೊಳ್ಳಲೇ ಬೇಕು ಎಂದುಬಿಟ್ಟರು. ನನ್ನ ಮಗಳು ಏನಾದರೂ ಆಪರೇಷನ್ ಮಾಡಿ ಸರಿಪಡಿಸಬಹುದೇ ಎಂದಾಗ ಕಷ್ಟ ಎನ್ನುತ್ತಾ ಸ್ವಲ್ಪ ದಿನ ಮಾತ್ರೆ ತೆಗೆದುಕೊಳ್ಳಲಿ, ಎರಡು ತಿಂಗಳ ನಂತರ ನೋಡೋಣ ಎಂದರು. ಮಗಳು ಅಳುತ್ತಾ ನನ್ನನ್ನು ಮನೆಗೆ ಕರೆತಂದಳು. ಇನ್ನು ನಾನು ಡಾಕ್ಟರ್ ಬರೆದ ಮಾತ್ರೆ ಒಂದು ತಿಂಗಳಿಗಾಗುವಷ್ಟು ಕೊಂಡು ತಂದೆ. ಒಂದು ಮಾತ್ರೆಯ ಬೆಲೆ ಕೇವಲ ಒಂದು ರೂಪಾಯಿ ಇದ್ದದ್ದು ಮಾತ್ರೆ ನೋಡಿದಾಗ ನನಗೆ ಅರ್ಧ ನೋವು ಕಡಿಮೆ ಆದ ಹಾಗೆ ಅನ್ನಿಸಿತು 😀😃. ಏನೋ ಸ್ವಲ್ಪ ಸಮಾಧಾನ. ಜೀವನಪರ್ಯಂತ ತೆಗೆದುಕೊಳ್ಳಬೇಕಲ್ಲ ಆದ್ದರಿಂದ.
ಅದೇನು ಒಂದು ರೂಪಾಯಿಯ ಮಾತ್ರೆ ಪ್ರಭಾವ ಅಂತೀರಾ ? ಬಹಳ ಖುಷಿಯಿಂದಲೇ ಮಧ್ಯಾಹ್ನದ ಊಟವಾದ ಮೇಲೆ ಒಂದು ಮಾತ್ರೆ ತೆಗೆದುಕೊಂಡೆ. ಸ್ವಲ್ಪ ಹೊತ್ತಿನ ನಂತರ ಯಾಕೋ ತಲೆ ಸುತ್ತುವಿಕೆ. ಹೊರಗೆ ಹೋದ ಆಯಾಸ ಎಂದು ನಿದ್ರೆ ಮಾಡಿದೆ. ಸಾಯಂಕಾಲ ಸ್ವಲ್ಪ ಹ್ಯಾಂಗೋವರ್ ಇತ್ತು. ಗಮನ ಕೊಡಲಿಲ್ಲ. ಮತ್ತೆ ರಾತ್ರಿ ಊಟವಾದ ಮೇಲೆ ಮತ್ತೆ ಮಾತ್ರೆ ತೆಗೆದುಕೊಂಡು ಮಲಗಿದೆ.
ಬೆಳಿಗ್ಗೆಯೂ ಸ್ವಲ್ಪ ಹ್ಯಾಂಗೋವರ್. ಗಮನ ಕೊಡಲಿಲ್ಲ. ಎರಡು ದಿನ ವಾಯಿತು. ಹಲ್ಲು ನೋವೂ ಕಮ್ಮಿಯಾಗಲಿಲ್ಲ, ಗಲ್ಲ ಕಂಪನ ಸ್ವಲ್ಪ ಕಡಿಮೆ ಆದ ಹಾಗೆ ಅನಿಸಿತು. ಮೂರು ನಾಲ್ಕು ದಿನವಾದಮೇಲೂ ಹಲ್ಲು ನೋವು ಕಡಿಮೆಯಾಗಲಿಲ್ಲ. ನಾಲ್ಕನೆಯ ದಿನ ಸಂಜೆ ಹೊರಗೆ ಅಷ್ಟು ದೂರ ನಡೆದುಹೋಗಿ ವಾಪಸ್ಸು ಮನೆಗೆ ಬಂದೆ. ನನಗೆ ಹ್ಯಾಂಗೋವರ್ ಹೋಗಿರಲಿಲ್ಲ. ಏನೋ ತಲೆ ಸುತ್ತು ಯಾವಾಗಲೂ ಇತ್ತು. ನಾನು ವಾಪಸ್ಸು ಬರುವುದನ್ನು ನೋಡಿದ ನನ್ನಾಕೆ ನಾನು ಸರಿಯಾಗಿ ನಡೆಯುತ್ತಿಲ್ಲ ಎಂದು ಹೇಳಿದಳು. ನನಗೂ ಹಾಗೆ ಅನ್ನಿಸುತ್ತಾ ಇತ್ತು. ಎನಿಲ್ಲವೆಂದು ಸಮಾಧಾನ ಮಾಡಿ ಊಟ ಮಾಡಿ ಮತ್ತೆ ಮಾತ್ರೆ ತೆಗೆದುಕೊಂಡು ಮಲಗಿಕೊಂಡೇ ಯೋಚನೆ ಮಾಡಲು ಪ್ರಾರಂಭಿಸಿದೆ. ಆದರೆ ಮಾತ್ರೆಯ ಪ್ರಭಾವವೇನೋ ನಿದ್ರೆ ತಕ್ಷಣವೇ ಬರುತ್ತಿತ್ತು. ಯೋಚನೆ ಮಾಡಲು ಮಾತ್ರೆ ಸಮಯ ಕೊಡಲಿಲ್ಲ.
ಮಾರನೆಯ ದಿನ ನಾನು ದೀರ್ಘವಾಗಿ ಯೋಚನೆ ಮಾಡಿ ನಡೆದದ್ದೆಲ್ಲ ಮೆಲಕು ಹಾಕಿದೆ. ನನ್ನ ಮನೆಯಲ್ಲಿ ನರ ದೌರ್ಬಲ್ಯತೆಯ ಖಾಯಿಲೆ ಈ ಹಿಂದೆ ಯಾರಿಗೂ ಇಲ್ಲ, ಆದ್ದರಿಂದ ಈಗ ನನಗೆ ಕೇವಲ ಹಲ್ಲಿನ ಖಾಯಿಲೆ ಮಾತ್ರ ಇರಬೇಕು. ಹೇಗೂ ಎಲ್ಲ ವಯಸ್ಸಾದವರು ಹಲ್ಲು ಕೀಳಿಸುವುದು ಸರ್ವೇ ಸಾಮಾನ್ಯ. ನನಗೆ ಸ್ವಲ್ಪ ಬೇಗ ಬಂದಿರಬಹುದು ಎಂದು ಅಂದುಕೊಂಡೆ. ಒಂದು ನಿರ್ಧಾರಕ್ಕೆ ಬಂದೆ. ಹಲ್ಲಿನ ಡಾಕ್ಟರ್ ಹತ್ತಿರ ಹೋಗಿ ದಯವಿಟ್ಟು ಆ ನೋವು ಕೊಡುವ ದವಡೆ ಹಲ್ಲು ಕಿತ್ತುಬಿಡಿ ಎಂದು ಗೋಗರೆದೆ. ಕನಿಕರ ತೋರಿ ಆ ಡಾಕ್ಟರ್ ಮೂರು ಇಂಜೆಕ್ಷನ್ ದವಡೆಗೆ ಕೊಟ್ಟು ಆ ಹಲ್ಲನ್ನು ಕಿತ್ತಿದರು. ಹಲ್ಲಿನ ಕೊನೇ ಕೆಳಭಾಗದಲ್ಲಿ ಹುಳುಕು ಕಾಣಿಸುತ್ತಿತ್ತು. ನನಗೆ ಏನೋ ಸಮಾಧಾನ.
ಮನೆಗೆ ಬಂದು ಎರಡನೆಯ ದಿನದಿಂದ ಯಾವ ನೋವು ಕಾಣಲಿಲ್ಲ ಮತ್ತು ಅನುಭವಿಸಲೂ ಇಲ್ಲ. ನನ್ನ ನಿರ್ಧಾರ ಸರಿಯಿತ್ತು.
ಇನ್ನೂ ಮುಗಿದಿಲ್ಲ....
ಏಳು ವರ್ಷಗಳ ನಂತರ 2017ರಲ್ಲಿ ಇನ್ನೊಂದು ದವಡೆ ಹಲ್ಲು ನೋಯಿಸಲು ಪ್ರಾರಂಭವಾಯಿತು. ಆಗ ನಾನು ಅಮೆರಿಕದಲ್ಲಿದ್ದೆ. ಎಲ್ಲಾ ಸೆಲ್ಫ್ ಮೆಡಿಕೇಶನ್ ಒಂದು ತಿಂಗಳ ವರೆಗೆ ನಡೆದು ಕೊನೆಗೆ ವಿಫಲವಾದಾಗ ಡೆಂಟಿಸ್ಟ್ ಹತ್ತಿರ ಹೋಗಲೇ ಬೇಕಾಯಿತು. ಭಾರತಕ್ಕೆ ಬರಲು ಕೇವಲ 40 ದಿನಗಳು ಮಾತ್ರ ಉಳಿದಿದ್ದವು. ಆದರೆ ನೋವು ತಡೆಯಲು ಆಗಲೇ ಇಲ್ಲ. ಈ ಸಲ ಡಾಕ್ಟರ್ ಹತ್ತಿರ ಹೋದಾಗ ಎಲ್ಲಾ ಹಲ್ಲುಗಳ ಒಂದು xray ತೆಗೆದಾಗ xray clean ಅಂದರು. ಹಲ್ಲುಗಳಿಗೆ deeper cleanನ ಅಗತ್ಯೆ ಇದೆ ಎಂದು ಹೇಳಿ ಮೊದಲೇನೆಯ ಕೋಟೇಶನ್ 625 ಡಾಲರ್ ನದ್ದು ಕೊಟ್ಟರು. ಇನ್ನೂ 2 ನೆಯ ಕೋಟೇಶನ್ ನಂತರ ಕೊಡುವುದಾಗಿ ಹೇಳಿದರು. ನನಗೆ ಹಲ್ಲಿನ ಇನ್ಸುರನ್ಸ್ ಇಲ್ಲ, ಮುಂದಿನ ವಾರ ಇಂಡಿಯಾ ಗೆ ಹೋಗಬೇಕು. ಅಲ್ಲಿ ತೋರಿಸುವೆ ಎಂದೆ. 10 ದಿನಕ್ಕೆ Antibiotic ಬರದುಕೊಟ್ಟರು. ಮಾತ್ರೆಯ ಪ್ರಭಾವದಿಂದ ನೋವು ಕಡಿಮೆ ಯಾಯಿತು. ಮೈಸೂರಿಗೆ ಬಂದಮೇಲೂ ಎರಡು ತಿಂಗಳು ನೋವು ಬರಲಿಲ್ಲ, ಆದರೆ ಮನಸ್ಸು ಕಾಡುತ್ತಿತ್ತು.
ಎರಡು ತಿಂಗಳ ನಂತರ ಸ್ವಲ್ಪ ಹಲ್ಲು ನೋವು ಕಾಣಿಸಲು ಮತ್ತೆ ಅದೇ ಮೈಸೂರಿನ ಡಾಕ್ಟರ್ ಹತ್ತಿರ ಹೋದೆ. ಈ ಸಲ xray, root-canal ಎಂತೆಲ್ಲಾ lecture ಕೊಟ್ಟರು. ಹಲ್ಲು ಕೀಳಿರಿ, ಹಣ ಇಲ್ಲ ಅಂದೆ. ಆದರೂ ಬಿಡದೆ antibiotic ಬರೆದುಕೊಟ್ಟರು. ಮಾತ್ರೆ ತೆಗೆದುಕೊಳ್ಳದೇ ಮನೆಗೆ ಬಂದು ಮೂರು ದಿನವಾದ ಮೇಲೆ ಮತ್ತೇ ತುಂಬಾ ನೋವು ಎಂದು ಸುಳ್ಳು ಹೇಳಿ ಹಲ್ಲನ್ನು ಕೀಳಿಸಿದೆ. ಮೊದಲಿನ ಹಲ್ಲಿನ ತರವೇ ಹಲ್ಲಿನ ಕೊನೆ ತುದಿಯಲ್ಲಿ ಹುಳುಕು ಕಂಡಿತ್ತು.
ನನ್ನ ಅನಿಸಿಕೆ -
ಎಲ್ಲಾ ಡಾಕ್ಟರ್ ಗಳ ಹತ್ತಿರ ಬರುವ ಎಲ್ಲಾ ರೋಗಿಗಳು ಡಾಕ್ಟರ್ ಗೆ ಕೇವಲ ಒಂದು test case ಇದ್ದಹಾಗೆ. ರೋಗಿಗಳ ಅದೃಷ್ಟದ ಮೇಲೆ ಅವರ ಗುಣ ಅವಲಂಬಿಸಿದೆ.
No comments:
Post a Comment