Thursday 24 December 2020

ಮಡಿ ಮಡಿ ಮಡಿ ಏನಿದು ಮಡಿ madi madi madi

Thoughts
ಮಡಿ ಮಡಿ ಮಡಿ... ಏನಿದು ಮಡಿ?  

ಪೀಠಿಕೆ: ಶ್ರೀವಿಷ್ಣುಪುರಾಣ ತೃತೀಯಾಂಶ: ಏಕಾದಶೋಧ್ಯಾಯ:
ಗೃಹಸ್ಥನಿಗೆ ಸಂಬಂಧಿಸಿದ ಸದಾಚಾರಗಳು.
***
ನದೀನದತಟಾಕೇಷು ದೇವಖಾತಜಲೇಷು ಚ|
ನಿತ್ಯಕ್ರಿಯಾರ್ಥಂ ಸ್ನಾಯೀತ ಗಿರಿಪ್ರಸ್ರವಣೇಷು ಚ||24||
ಕೂಪೇಷೂದ್ ಧೃತತೋಯೇನ ಸ್ನಾನಂ ಕುರ್ವೀತ ವಾ ಭುವಿ|
ಗೃಹೇಷೂದ್ ಧೃತತೋಯೇನ ಹ್ಯಥವಾ ಭುವ್ಯಸಂಭವೇ||25||
ಶುಚಿವಸ್ತ್ರಧರ: ಸ್ನಾತೋ ದೇವರ್ಷಿಪಿತೃತರ್ಪಣಮ್|
ತೇಷಾಮೇವ ಹಿ ತೀರ್ಥೇನ ಕುರ್ವೀತ ಸುಸಮಾಹಿತ:||26||
ತ್ರಿರಪ: ಪ್ರೀಣನಾರ್ಥಾಯ ದೇವಾನಾಮಪವರ್ಜಯೇತ್|
ಋಷೀಣಾಂ ಚ ಯಥಾನ್ಯಾಯಂ ಸಕೃಚ್ಚಾಪಿ ಪ್ರಜಾಪತೇ:|| 27 ||
ಪಿತೃಣಾಂ ಪ್ರೀಣನಾರ್ಥಾಯ ತ್ರಿರಪ: ಪೃಥಿವೀ ಪತೇ|
ಪಿತಾಮಹೇಭ್ಯಶ್ಚ ತಥಾ ಪ್ರೀಣಯೇತ್ ಪ್ರಪಿತಾಮಹಾನ್||28||
ಮಾತಾಮಹಾಯ ತತ್ಪಿತ್ರೇ ತತ್ಪಿತ್ರೇ ಚ ಸಮಾಹಿತ:|
ದದ್ಯಾತ್ ಪೈತ್ರೇಣ ತೀರ್ಥೇನ ಕಾಮ್ಯಂ ಚಾನ್ಯಚ್ಛೃಣುಷ್ವ ಮೇ||29||

ಅರ್ಥ :-
ಶಾಸ್ತ್ರೀಯವಾದ ನಿತ್ಯಕರ್ಮಗಳನ್ನು ಮಾಡುವಾಗ ಮೊದಲು ಸ್ನಾನ ಮಾಡತಕ್ಕದ್ದು.
ನದಿ, ಹಳ್ಳ, ಸರಸ್ಸುಗಳಲ್ಲಿಯೂ ಸ್ವತ:ಸಿದ್ಧವಾದ ಜಲಾಶಯಗಳಲ್ಲಿಯೂ ಗಿರಿ ಝರಿಗಳಲ್ಲಿಯೂ ಮೀಯುವುದು ವಿಹಿತವಾಗಿದೆ.
ಅಥವಾ ಬಾವಿಗಳಿಂದ ನೀರನ್ನೆತ್ತಿ ನೆಲದ ಮೇಲೆ ನಿಂತು ಸ್ನಾನ ಮಾಡಬೇಕು.
ಅದು ಆಗದಿದ್ದರೆ ಎತ್ತಿದ ನೀರನ್ನು ಮನೆಗೆ ತಂದು ಸ್ನಾನ ಮಾಡಬಹುದು.
ಸ್ನಾನವಾದ ಮೇಲೆ ಶುಚಿಯಾದ ವಸ್ತ್ರವನ್ನು ಧರಿಸಿ ದೇವ-ಋಷಿ-ಪಿತೃಗಳಿಗೆ ಕ್ರಮವಾಗಿ ದೈವಾದಿತೀರ್ಥಗಳಿಂದ ತರ್ಪಣವನ್ನೀಯತಕ್ಕದ್ದು.
ದೇವತೆಗಳ ಪ್ರೀತಿಗಾಗಿ ಮೂರು ಸಲವೂ, ಅದೇ ರೀತಿಯಲ್ಲಿ ಋಷಿಗಳಿಗೂ ಪ್ರಜಾಪತಿಗಾಗಿ ಒಂದು ಸಲವೂ ಜಲವನ್ನು ಬಿಡಬೇಕು.
ರಾಜ, ಪಿತೃ-ಪಿತಾಮಹ-ಪ್ರಪಿತಾಮಹರ ಪ್ರೀಣನಕ್ಕಾಗಿ ಮೂರು ಸಲ ತರ್ಪಣವನ್ನೀಯಬೇಕು.
ಹಾಗೆಯೇ ಮಾತಾಮಹ, ಮಾತು:ಪಿತಾಮಹ, ಮಾತು:ಪ್ರಪಿತಾಮಹರಿಗೂ ಸಹ ಸಮಾಹಿತವಾಗಿ ಪಿತೃತೀರ್ಥದಿಂದ ತರ್ಪಣವನ್ನೀಯಬೇಕು.
***
ಈಗ ವಿಷಯಕ್ಕೆ ಬರೋಣ -
ವಿಷ್ಣು ಪುರಾಣದಲ್ಲಿ ಹೇಳಿರುವ ಮೇಲಿನ ವಿಷಯ ಇಂದಿನ ಕಾಲಕ್ಕೆ ಇದು ಎಷ್ಟು ಸಮಂಜಸ ?
ಬೋರೆವೆಲ್ ನೀರು ಮಡಿಗೆ ಬರುವುದಿಲ್ಲ, ಏಕೆಂದರೆ ಕಬ್ಬಿಣದ ಪೈಪು ಇರುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿರುವ ನಲ್ಲಿಯ ನೀರೂ ಮಡಿಗೆ ಬರುವುದಿಲ್ಲ. ಬಾವಿ ತೋಡಿಸಿದರೆ ನೀರು ಸಿಗುವುದಿಲ್ಲ, ಸಿಕ್ಕರೂ 300 ರಿಂದ 500 ಅಡಿಯಿಂದ ನೀರು ಮೇಲೆ ಜಗ್ಗಲು ಆಗುವುದಿಲ್ಲ. ಏನು ಉಪಾಯ?
ನದಿ ಕೊಳ ಬಾವಿ ಹುಡುಕಿಕೊಂಡು  ಎಲ್ಲ ಬ್ರಾಹ್ಮಣರು ಹಳ್ಳಿಯಲ್ಲಿದ್ದು, ಕೆಲಸಕ್ಕೋಸ್ಕರ ಪಟ್ಟಣಕ್ಕೆ ಹೇಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯ? 
ವಿಜ್ಞಾನದ ಉಪಯೋಗ ಪಡೆದರೆ, ಅಂದರೆ ಕಾರು ಬಸ್ಸು ಮೋಟಾರ್ ಸೈಕಲ್ ಬಳಕೆಯಿಂದ  ಮಡಿ ಹೋಗುತ್ತದೆ.  ಮತ್ತೆ ಸ್ನಾನ ಮಾಡಬೇಕು, ಮತ್ತೆ ಬಾವಿ ಹುಡುಕಬೇಕು.
Ohh! getting confused?
ಎನು ಈ ಮಡಿ? ನಾವೇ ಮಾಡಿಕೊಂಡ ಒಂದು ಕ್ರಮ ಅಥವಾ ಪದ್ದತಿ.  
ಏಕೆ  ಮಡಿ? ಮನಸ್ಸು ಶುದ್ಧದ ಜೊತೆಗೆ ದೇಹ ಶುದ್ಧವೂ ಬೇಕು.

a.ನಾವು ಕಾಲಕ್ಕೆ ತಕ್ಕಂತೆ ಬದಲಾಗುವುದು ಒಳ್ಳೆಯದಲ್ಲವೇ?
b.ನಿತ್ಯ ಸ್ನಾನಕ್ಕೆ ಕಡ್ಲೆ ಹಿಟ್ಟು, ಸೀಗೆ ಪುಡಿ ಈಗ ಎಷ್ಟು ಜನ ಉಪಯೋಗಿಸುತ್ತಾರೆ?
c.ಸಾಕಷ್ಟು ಪುರೋಹಿತರು ಈಗಾಗಲೇ ಮೊಬೈಲ್ ಬಳಕೆ ಪ್ರಾರಂಭಿಸಿದ್ದಾರೆ. ದೇವ ಕಾರ್ಯ ಮಾಡುತ್ತಿದ್ದಾಗ ಅಥವಾ ಮಾಡಿಸುತ್ತಿದ್ದಾಗ ಮೊಬೈಲ್ ಫೋನ್ ಕರೆ ಎತ್ತದಿದ್ದರೆ ಅವರಿಗೆ ಸಿಗುವ ಕೆಲಸಕ್ಕೆ ತೊಂದರೆ ಆಗಬಹುದಲ್ಲವೇ?
d.ಅತಿ ಮುಖ್ಯವಾಗಿ ಎಲ್ಲ ಯತಿಗಳು ಕಾರಿನಲ್ಲಿ ಓಡಾಡುತ್ತಾರೆ. ಇದು ಸರಿಯೇ? ಕಾರಿನಲ್ಲಿ ಓಡಾಡದೇ ಮರದ ಚಪ್ಪಲಿ ಹಾಕಿಕೊಂಡು ಅವರು ಎಷ್ಟು ಊರುಗಳನ್ನು ನಡೆದು ತಲುಪಬಲ್ಲರು? ನಡೆಯಲಿಕ್ಕೆ ಅವರು ತಯಾರಿದ್ದಾರೆಯೇ? ಕಾರಿನಲ್ಲಿ ಓಡಾಡುವುದರಿಂದ ಅವರು ಬದಲಾಗಿಲ್ಲವೇ?  ಈ ಪ್ರಶ್ನೆ ಕೇಳುವವರು ಎಲ್ಲರಿಂದ ನಿಂದನೆಗೆ ಒಳಗಾಗುತ್ತಾರೆ. ಉದ್ಧಟತನದ ಪ್ರಶ್ನೆ ಎನ್ನುತ್ತಾರೆ.  ನಮ್ಮವರೇ (ಭಕ್ತಾದಿಗಳು) ಯತಿಶ್ರೇಷ್ಠರನ್ನು ಪ್ರಶಿಸುವ ಹಕ್ಕು ನಮಗಿಲ್ಲ ಎಂದು ಮೂದಲಿಸುತ್ತಾರೆ.
e.ಪಿತೃ ಕಾರ್ಯ ಮನೆಯಲ್ಲಿ ಮಾಡಬೇಕೆಂದು ಶಾಸ್ತ್ರ ಹೇಳುತ್ತದೆ.  ಆದರೆ ಈಗ ಮಡಿ ಕಾರಣದಿಂದ ಈ ಕಾರ್ಯವನ್ನು ಮನೆಯಲ್ಲಿ ಮಾಡಲು ಹರ ಸಾಹಸ ಮಾಡಬೇಕು.  ಎಲ್ಲರೂ ಮಠದ ಆಶ್ರಯ ಪಡೆದಿದ್ದಾರೆ.   ಈ ಬದಲಾವಣೆ ಈಗ ಎಲ್ಲರ ಒಪ್ಪಿಗೆ ಪಡೆದಿದೆ.
f.ದೇವರ ನೈವೇದ್ಯಕ್ಕೆ ಗಾಸ್ ಒಲೆಯಿಂದ ಮಾಡಿದ ಅಡುಗೆ ಬರುವುದಿಲ್ಲ.  ಇದಕ್ಕೆ ಇನ್ನೂ ಸುಧಾರಣೆಯ ಅಗತ್ಯವಿದೆ. 

ಆದ್ದರಿಂದ.....
ಮನಸ್ಸು ಗಟ್ಟಿ ಮಾಡಿಕೊಳ್ಳಿ,  ಮನಸ್ಸನ್ನು ಅಸೂಯೆ ಅಂತಸ್ತು ಗಳಿಂದ ಕಲ್ಮಶ ಮಾಡಿಕೊಳ್ಳಬೇಡಿ. ಪೂಜೆ ಮಾಡುವಾಗ ಮಡಿಯ ಬಗ್ಗೆ ಯೋಚಿಸುತ್ತಾ ಭಕ್ತಿಯನ್ನು ಕಳೆದುಕೊಳ್ಳದಿರಿ ಮತ್ತು ಏಕಾಗ್ರತೆಯನ್ನು ಪಾಲಿಸಿರಿ. 
ಎಲ್ಲಾ ಬ್ರಾಹ್ಮಣರ ಮನೆಗಳಲ್ಲಿ ಸ್ವಚ್ಛತೆಯನ್ನು ಯಾವಾಗಲೂ ಅನುಸರಿಸುವುದು ಶತಮಾನಗಳಿಂದ ಬಂದಿರುವ ವಾಡಿಕೆ.  ಪ್ರತಿನಿತ್ಯ ಬೆಳಿಗ್ಗೆಯ ಸಮಯದಲ್ಲಿ ಸ್ನಾನ ಮಾಡುವುದು, ಹೊರಗಿನಿಂದ ಮನೆಗೆ ಬಂದಾಗ ಕೈಕಾಲು ತೊಳೆದು ಬಟ್ಟೆ ಬದಲಾಯಿಸುವುದು, ಊಟವಾದಮೇಲೆ ತಟ್ಟೆಯಲ್ಲಿ ಕೈ ತೊಳೆಯದೆ ಹೊರಗೆ ತೊಳೆಯುವುದು, ಸ್ನಾನನಂತರವೇ ದೇವರ ಪೂಜೆ, ದೇವರನ್ನು ಮುಟ್ಟುವುದು, ಎಲ್ಲಾ ಬೇಯಿಸಿದ ಪದಾರ್ಥಗಳನ್ನು ಒಂದೆಡೆ ದೂರ ಇಡುವುದು, ಮುಂತಾದುವುಗಳು ಈಗಲೂ ಸಾಕಷ್ಟು ರೂಢಿಯಲ್ಲಿದೆ. 
ನಮಗೆಲ್ಲರಲ್ಲಿ ಇರಬೇಕಾಗಿರುವುದು ಏನೆಂದರೆ 
೧. ಮನಸ್ಸನ್ನು ಶುದ್ಧವಾಗಿ ಹಾಗೂ ನಿರ್ಮಲವಾಗಿ ಇಟ್ಟುಕೊಳ್ಳಬೇಕು. ಇದು ಕಷ್ಟ, ಹೇಳುವುದು ಸುಲಭ, ಪಾಲಿಸುವುದು ಕಷ್ಟ. ಆದರೂ  ಸಾಧ್ಯವಾದಷ್ಟು ಪ್ರಯತ್ನಿಸಬಹುದು. 
೨. ಇನ್ನೊಬ್ಬರ ಮೇಲೆ ಅಸೂಯೆ ಬೇಡ, ನಮ್ಮ status (ಸ್ಥಿತಿ) ತಕ್ಕಂತೆ ನಾವು ಜೀವನ ನಡೆಸಿದರಾಯ್ತು.  
೩. ಮಡಿ ಕಾರಣಕ್ಕೆ ಮನೆಯಲ್ಲಿ ದೊಡ್ಡವರ ಹಾಗೂ ಚಿಕ್ಕವರ ಅಥವಾ ಅಕ್ಕ ಪಕ್ಕದ ಮನೆಯವರ ಅಥವಾ ಬಂಧುಗಳ ನಡುವೆ ಮನಸ್ತಾಪ ಬೇಡ. 
೪. ಹಾಗೆಯೇ ಮಡಿ ಮಾಡದವರನ್ನು ಕೀಳಾಗಿ ಕಾಣಬೇಡಿರಿ ಮತ್ತು   ಅವರ ಮನಸ್ಸನ್ನು ತಿಳಿಯಿರಿ.
೫. ಕಟ್ಟಿಗೆಯಿಂದ ಅಡುಗೆ ಮಠದಲ್ಲಿ ನಡೆಯುವ ದೇವತಾ ಕಾರ್ಯಗಳಿಗೆ ಸೀಮಿತವಾಗಿರಲಿ.  ಮನೆಯಲ್ಲಿ ಗ್ಯಾಸ್ ಒಲೆಯಲ್ಲಿ ಅಡಿಗೆ ಮಾಡಿ ದೇವರಿಗೆ ನೈವೇದ್ಯ ಮಾಡುವವರ ಬಗ್ಗೆ ಬೇಸರ ತೋರಿಸಬೇಡಿರಿ.   
ಗ್ಯಾಸ್ ಒಲೆಯಲ್ಲಿ ಅಡುಗೆ ಮಾಡುವವರು ಅಡಿಗೆ ಮಾಡಿದಾಗ ಯತಿಶ್ರೇಷ್ಠರ ಕಾರು ಪ್ರಯಾಣವನ್ನು ನೆನಪಿಸಿಕೊಳ್ಳಿರಿ. ಅಪರಾಧ ಪ್ರಜ್ಞೆ/ ತಪ್ಪಿತಸ್ಥ ಮನೋಭಾವ ಮನಸ್ಸಿನಿಂದ ತೆಗೆಯಿರಿ. ಗ್ಯಾಸು ಚೆನ್ನಾಗಿ ಸ್ವಚ್ಛ ಮಾಡಿ ಅಡಿಗೆ ಮಾಡಿದರಾಯ್ತು, ತಪ್ಪೇನಿದೆ?  
ವಿ.ಸೂ: ಸಲಹೆ ಅಥವಾ ಪ್ರತಿಕ್ರಿಯೆಯಲ್ಲಿ ಮೃದುತ್ವ ಇರಲಿ, ಯಾರೊಬ್ಬರ ಮನಸ್ಸಿಗೆ ಬೇಸರ ತರುವುದು ಬೇಡ..
end- thoughts documented ಸಂಟೈಂ ಇನ್ August 2020

.
back to  

end.

.

No comments:

Post a Comment