Imaginative story
ಹತ್ತನೇ ತರಗತಿಯವರೆಗೆ ಹುಡುಗರ ಶಾಲೆಯಲ್ಲಿ ಹಾಗೂ ಕನ್ನಡ ಮಾಧ್ಯಮದಲ್ಲಿ ಓದು ಮುಗಿಸಿ ಪ್ರೀ-ಯೂನಿವರ್ಸಿಟಿ ಕಾಲೇಜಿಗೆ ಸೇರಿದಾಗ ನನಗೆ ಹದಿನೈದು ವರುಷ ತುಂಬಿ ಹದಿನಾರಕ್ಕೆ ಕಾಲಿಟ್ಟಾಗಿತ್ತು. ಕಾಲೇಜಿನಲ್ಲಿ ಸಹಶಿಕ್ಷಣ (co-education) ಪದ್ಧತಿ ಇದ್ದಿದ್ದು ನನ್ನ ಹರೆಯ ವಯಸ್ಸಿಗೆ thrill ಕೂಡ ಕೊಟ್ಟಿತ್ತು. ಓದಿನಲ್ಲಿ ತುಂಬಾ ಚುರುಕಾಗಿದ್ದುದ್ದರಿಂದ ಮೊದಲ ಕಿರು ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ. ಈ ಮೊದಲ ಸ್ಥಾನ ತರಗತಿಯಲ್ಲಿರುವ ಹುಡುಗಿಯರಿಗೆ ನನ್ನ ಮೇಲೆ ಒಳ್ಳೆಯ ಭಾವನೆ ಮೂಡಿಸಿರಬಹುದೇನೋ. ನನ್ನ ತರಗತಿಯಲ್ಲಿದ್ದ ಭುವನೇಶ್ವರದಿಂದ ಬಂದಿದ್ದ ಹುಡುಗಿಯೊಬ್ಬಳು ಪ್ರಾಯಶಃ ಇದೇ ಕಾರಣಕ್ಕೇನೋ ಎನ್ನುವಂತೆ ನನ್ನ ಸ್ನೇಹಕ್ಕಾಗಿ ಹಂಬಲಿಸಿದಳು. ಇಂಗ್ಲಿಷಿನ ವಿಷಯದಲ್ಲಿ ಕಂಠಪಾಠದ ಬಲದಿಂದ ಹೆಚ್ಚು ಅಂಕಗಳನ್ನು ಗಳಿಸಿದ್ದರೂ ನನಗೆ ಇಂಗ್ಲಿಷಿನಲ್ಲಿ ಮಾತನಾಡಲು ಮಾತ್ರ ಸರಿಯಾಗಿ ಸ್ವಲ್ಪವೂ ಬರುತ್ತಿರಲಿಲ್ಲ. ಬೇರೆಯವರು ಮಾತನಾಡಿದ್ದು ನನಗೆ ಅರ್ಥವಾಗುತ್ತಿತ್ತು ಅಷ್ಟೇ.
ನನ್ನ ಬುದ್ಧಿವಂತಿಕೆಗೆ ಮಾರುಹೋಗಿ ಕೆಲದಿನಗಳ ನಂತರ ಆ ಭುವನೇಶ್ವರದ ಹುಡುಗಿ ದಿನದ ಮೊದಲ ಉಪನ್ಯಾಸ ಪ್ರಾರಂಭವಾಗುವ ಮುಂಚೆ ನನ್ನ ಹತ್ತಿರ ಬಂದು ಭೂಗೋಳಶಾಸ್ತ್ರ ವಿಷಯದಲ್ಲಿರುವ ಒಂದು ಅಧ್ಯಾಯದ ಬಗ್ಗೆ ನನ್ನನ್ನು ಕೆಲವು ಸಂದೇಹ ನಿವಾರಣೆಗಾಗಿ ಇಂಗ್ಲಿಷಿನಲ್ಲಿ ಮಾತನಾಡಿಸಿ ಕೇಳಿದಳು. ಅವಳು ಮಾತನಾಡಿದ ಧಾಟಿ, ಶೈಲಿ ಮತ್ತು ಮುಖಚರ್ಯೆಯಲ್ಲಿ ತೋರಿದ ಭಾವನೆಗಳನ್ನು ಕೂಲಂಕಿಸಿ ವಿಶ್ಲೇಷಿಸಿದಾಗ ಅವಳು ನನ್ನ ಸ್ನೇಹಕ್ಕಾಗಿ ಹಾತೊರೆಯುವಂತಿತ್ತು. ಈ ಅನಿರೀಕ್ಷಿತದಿಂದ ನನಗೆ ಏನು ಹೇಳಬೆಂಕೆಂದು ಗೊತ್ತಾಗದೆ 'ok ok, no problem, later' ಎಂದು ಕಷ್ಟಪಟ್ಟು ಹೇಳಿ 'excuse me' ಎನ್ನುತ್ತಾ ಮೆಲ್ಲನೆ ಜಾರಿಕೊಂಡೆ.
ಆ ದಿನದ ಪಾಠ ಒಂದೂ ತಲೆಯಲ್ಲಿ ಹೋಗದೆ ಕೇವಲ ಆ ಹುಡುಗಿಯ ಹತ್ತಿರ ಹೇಗೆ ಇಂಗ್ಲಿಷಿನಲ್ಲಿ ಚರ್ಚಿಸುವುದು ಎಂದು ನನ್ನ ತಲೆಯಲ್ಲಾ ಕೆದರಿಕೊಂಡೆ. ಊಹೂಂ, ಏನು ಯೋಚಿಸಿದರೂ ಉಪಾಯ ಹೊಳೆಯಲಿಲ್ಲ. ಹಾಳಾದ್ದು ನನಗೆ ಹಿಂದಿ ಭಾಷೆಯೂ ಬರುವುದಿಲ್ಲವಲ್ಲ. ನನ್ನ ಅಕ್ಕ ನನ್ನನ್ನು ಹಿಂದಿ ಪ್ರಥಮಾ ಪರೀಕ್ಷೆಗೆ ಕೂಡಿಸಲು ಏನೆಲ್ಲ ಸಾಹಸ ಮಾಡಿ ಬಲವಂತ ಮಾಡಿದಾಗ್ಯೂ ನಾನು ಹೇಗೋ ತಪ್ಪಿಸಿಕೊಂಡಿದ್ದನ್ನು ನಾನೀಗ ನನ್ನನ್ನೇ ಶಪಿಸಿಕೊಳ್ಳುವಂತೆ ಮಾಡಿತು. ಕನಿಷ್ಟ ಹಿಂದಿಯ ಮಧ್ಯಮ ಪರೀಕ್ಷೆ ಪಾಸು ಮಾಡಿದ್ದರೆ ಈಗ ಅವಳ ಹತ್ತಿರ ಹಿಂದಿಯಲ್ಲಾದರೂ ಮಾತನಾಡಿ ಸ್ನೇಹವನ್ನು ಬೆಳಸಬಹುದಿತ್ತಲ್ಲ, ಅಥವಾ ಅವಳೇಕೆ ಕನ್ನಡ ಕಲಿತಿಲ್ಲ ಎಂತೆಲ್ಲ ಯೋಚನೆಗಳು ನನ್ನ ಮನದಲ್ಲಿ ಹಾದುಹೋದವು.
ನನ್ನ ಹರೆಯದ ವಯಸ್ಸಿನಲ್ಲಿ ಒಂದು ಸುಂದರ ಹುಡುಗಿಯ ಸ್ನೇಹ ಕೈಬಿಡಲು ಮನಸ್ಸಿಲ್ಲದೆಯೇ ಇನ್ನೊಂದೆಡೆಗೆ ಈ ಇಂಗ್ಲಿಷ್ ಭಾಷೆಯನ್ನು ಒಂದೆರಡು ದಿನಗಳಲ್ಲಿ ಹೇಗಪ್ಪಾ ಮಾತನಾಡಲು ಕಲಿಯುವುದು ಎಂದು ಯೋಚಿಸುತ್ತ ಮನೆಯನ್ನು ತಲುಪಿದೆ.
ನನ್ನ ತಂದೆಯವರು ಇಂಗ್ಲಿಷಿನ ವಿಷಯದಲ್ಲಿ ಅತೀವ ಜ್ಞಾನವುಳ್ಳವರಾಗಿದ್ದರು. ಅವರ ಹತ್ತಿರ ಇಂಗ್ಲಿಷಿನಲ್ಲಿ ಮಾತನಾಡಲು ಕಲಿಸಿರಿ ಎಂದು ಕೇಳಲು ಭಯ. ಇಂತಹ ಮನೆಯಲ್ಲಿ ಎಂತಹ ಮಗ ಹುಟ್ಟಿದ್ದಾನೆ, ಏನಿದು ವಿಪರ್ಯಾಸ ಎನ್ನುತ್ತಾ ಬೈಗುಳದ ಮಳೆಯಲ್ಲಿ ಅವಮಾನದ ಸ್ನಾನ ಮಾಡಿಸಿಕೊಳ್ಳಲು ನನ್ನ ಸ್ವಾಭಿಮಾನ ಒಪ್ಪಲಿಲ್ಲ. ಆದರೆ ಆ ಭುವನೇಶ್ವರದ ಹುಡುಗಿ ಮನಸ್ಸಿನಲ್ಲಿ ಹಾದುಹೋದಂತೇ, ಧೈರ್ಯ ತಂದುಕೊಂಡು ಬೇರೆ ಉಪಾಯವಿಲ್ಲದೆಯೇ, ಉಪಾಯದಿಂದ ನನ್ನ ತಂದೆಯವರನ್ನು ವಿನಂತಿಸಿಕೊಳ್ಳಲೇ ಬೇಕಾಯಿತು. ಕಾಲೇಜಿನಲ್ಲಿ ನಾವೆಲ್ಲ ಇಂಗ್ಲಿಷಿನಲ್ಲಿಯೇ ಮತನಾಡಬೇಕೆಂದು ಅಧ್ಯಾಪಕರು ಕಡ್ಡಾಯ ಮಾಡಿದ್ದಾರೆಂದು ಸುಳ್ಳು ಹೇಳಿ ನನ್ನ ಇಂಗಿತವನ್ನು ತಂದೆಯವರ ಮುಂದೆ ಇಟ್ಟೆ. ಅಂದಿನಿಂದಲೇ ವ್ಯಾಕರಣಬದ್ದ ಇಂಗ್ಲಿಷಿನ ಮನೆ ಪಾಠ ಪ್ರಾರಂಭವಾಯಿತು. ನನ್ನ ತಂದೆಯವರು ಕನಿಷ್ಠ ಆರು ತಿಂಗಳಾದರೂ ಸಮಯ ಬೇಕೆಂದು ಹೇಳಿದಾಗ ನಾನು ಇನ್ನೂ ಬೇಗ ಕಲಿಸಿ, ಕಷ್ಟ ಪಡುವೆ ಎಂದು ಗೋಗೆರದರೂ ಕೇಳದೇ ಬೇಕಾದರೆ ಕಾಲೇಜಿಗೆ ಬಂದು ಅಧ್ಯಾಪಕರನ್ನು ಭೇಟಿಮಾಡಿ ಮಾತನಾಡುವೆನೆಂದರು. ತಕ್ಷಣ 'ನೀವು ಕಾಲೇಜಿಗೆ ಬರುವುದು ಬೇಡ ನಾನೇ ಕೇಳಿಕೊಳ್ಳುವೆ' ಎಂದು ಮತ್ತೊಂದು ಸುಳ್ಳು ಹೇಳಿ ತಪ್ಪಿಸಿಕೊಂಡೆ.
ಇತ್ತ ಮಾರನೆಯ ದಿನ ಆ ಭುವನೇಶ್ವರದ ಬೆಡಗಿ ಮೊದಲ ಉಪನ್ಯಾಸ ಪ್ರಾರಂಭವಾಗುವ ಮುಂಚೆ ನನ್ನನ್ನು ನೋಡಿ ಮಂದಹಾಸದಿಂದ ನಕ್ಕಾಗ ಮುಗ್ಧತೆಯಿಂದ ಕೂಡಿದ ಭಯದ ನಗು ನನ್ನ ತುಟಿಯಲ್ಲಿ ಅಚ್ಚು ಮೂಡಿದವು. ಐದಾರು ದಿನ ಬೇರೆ ಐದಾರು ಹುಡುಗರ ಜೊತೆಗೆ ಇದ್ದು ಹಾಗೂ ಹೀಗೂ ಆ ಹುಡುಗಿಯ ಭೇಟಿಯನ್ನು ತಪ್ಪಿಸಿದೆ.
ಅತ್ತ ನನ್ನ ತಂದೆಯವರೋ 'ನಾಮಪದ ಎಂದರೇನು' ಎಂದು ವ್ಯಾಕರಣದ ಮೊದಲನೆಯ ಪಾಠವನ್ನು ಪ್ರಾರಂಭಿಸಿದ್ದರಿಂದ ನಾನು ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಕಲಿಯಲು ಇನ್ನು ಕನಿಷ್ಠ ಎರಡು ವರ್ಷವಾದರೂ ಬೇಕೆಂದು ಮನದಟ್ಟಾಯಿತು. ಬೇಗ ಕಲಿಸಿರಿ ಎಂದು ಹೇಳಲು ಹೋದರೆ ಕಾಲೇಜಿಗೆ ಬರುವೆ ಎನ್ನುತ್ತಾರೆ!
ಇತ್ತ ಆ ಹುಡುಗಿ ದಿನವೂ ನನ್ನ ನೋಡಿ ನಗುತ್ತಾಳೆ, ನನ್ನ ಸ್ನೇಹಕ್ಕಾಗಿ ಕಾಯುತ್ತಿದ್ದಾಳೆ. ನನ್ನ ಮನಸ್ಸೂ ಸಹ ಅವಳ ಸ್ನೇಹವನ್ನು ಅಪೇಕ್ಷಿಸುತ್ತಿದೆ. ನಮ್ಮಿಬ್ಬರ ಮನಸ್ಸು ಭಾವನೆಗಳಿಗೆ ಒಂದೇ ಗುರಿ ಇದ್ದಂತಿತ್ತು. ಅದೇನೆಂದರೆ ಪಾಠದ ಕಾರಣ ಕೊಟ್ಟು ಮೊದಲು ಸ್ನೇಹ ನಂತರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ತರುವಾಯ ಪ್ರೀತಿ ಪ್ರೇಮದ ಬಾಗಿಲನ್ನು ತಟ್ಟುವುದಿತ್ತು. ಆದರೆ ನನಗೆ ಅವಳ ಹತ್ತಿರ ಹೋಗಲಿಕ್ಕೇ ಭಯ. ಅತ್ತ ದರಿ (ಹುಡುಗಿ) ಇತ್ತ ಪುಲಿ (ನನ್ನ ತಂದೆ) ಪರಿಸ್ಥಿತಿಯಾಗಿ ಕೊನೆಗೂ ಒಂದು ನಿರ್ಣಯವನ್ನು ತೆಗೆದುಕೊಂಡೆ.
ಮಾರನೆಯ ದಿನ ಸಂಜೆ ಎಲ್ಲ ಹುಡುಗರೂ ಹೊರಗೆ ಹೋಗುವುದನ್ನೇ ಕಾದು ಸ್ನೇಹಿತೆಯರ ಜೊತೆಗೆ ಮನೆಗೆ ಹೊರಟಿದ್ದ ಆ ಭುವನೇಶ್ವರದ ಹುಡುಗಿಯ ಹಿಂದೆ ಓಡಿದೆ. 'Excuse me' ಎಂದಾಗ ಉಳಿದ ಹುಡುಗಿಯರು ಬೈ ಎಂದು ಹೇಳಿ ಅವಳಿಂದ ದೂರವಾದರು. ಯಾರೂ ಅಲ್ಲೇ ನಿಲ್ಲಲಿಲ್ಲ. ಸಧ್ಯ ಒಬ್ಬಳೇ ಎಂದು ನಿಟ್ಟಿಸಿರು ಬಿಟ್ಟು ಮುಕ್ತ ಮನಸ್ಸಿನಿಂದ ಅವಳಿಗೆ ನಾನು ಬಾಯಿಪಾಠ ಮಾಡಿದ್ದ ಮೂರು ವಾಕ್ಯಗಳನ್ನು ಇಂಗ್ಲಿಷಿನಲ್ಲಿ ಹೇಳಿ ನನ್ನ ಇಂಗ್ಲಿಷಿನ ಕೊರತೆಯನ್ನು ತೋಡಿಕೊಂಡೆ ಮತ್ತು ಪಾಠದ ಅಧ್ಯಾಯದ ಬಗ್ಗೆ ಚರ್ಚಿಸುವುದು ಕಷ್ಟ ಎಂದು ಹೇಳಿಬಿಟ್ಟೆ. ಅವಳು 'No problem' ಎಂದು ಮನಸ್ಸಿಲ್ಲದಿದ್ದರೂ ಹೇಳಿ ನನಗೆ ವಿದಾಯ ಹೇಳಿದಳು.
ಅಂದಿನಿಂದ ಎರಡು ವರುಷದ ಪ್ರೀ-ಯೂನಿವರ್ಸಿಟಿ ಶಿಕ್ಷಣ ಮುಗಿಯುವವರೆಗೆ ನನ್ನ ಮತ್ತು ಆ ಹುಡುಗಿಯ ಸ್ನೇಹ ಕೇವಲ ದಿನಕ್ಕೊಂದು ಅಥವಾ ಎರಡು ಬಾರಿಯ ನಗೆಗೆ ಮಾತ್ರ ಸೀಮಿತವಾಯಿತು. ನನ್ನ ಇಂಗ್ಲೀಷು ಕಲಿಯುವಿಕೆ ಮಾತ್ರ ಬಿರುಸಿನಿಂದ ಸಾಗಿತ್ತು, ಸಾಗಲೇ ಬೇಕಿತ್ತು. ನಾನು ಬೇಡವೆಂದರೂ ನನ್ನ ತಂದೆಯವರು ಬಿಡಬೇಕಲ್ಲ!
ಅದೆಷ್ಟೋ ವರುಷಗಳ ಹಿಂದೆ ನನಗೆ ಸಿಕ್ಕ ಅವಕಾಶ ನನ್ನ ಕಣ್ಣ ಮುಂದೆಯೇ ಕಳೆದುಕೊಂಡಿದ್ದು ಇಂದಿಗೂ ಮರೆಯಲಾಗದಿದ್ದರೂ ನಮ್ಮ ಪ್ರೀ-ಯೂನಿವರ್ಸಿಟಿಯ ಪ್ರೀತಿ ಸಫಲವಾಗಿದ್ದಲ್ಲಿ ಎಷ್ಟರಮಟ್ಟಿಗೆ ನಮ್ಮ ಓದು ಸರಿಯಾಗಿ ಮುಂದುವರೆಯುತ್ತಿತ್ತು ಹಾಗೂ ನಮ್ಮನ್ನು ಎಷ್ಟು ಒಳ್ಳೆಯ ನಾಗರೀಕರನ್ನಾಗಿ ಮಾಡುತ್ತಿತ್ತು ಎಂಬ ಸಂಶಯ ಈಗಲೂ ಕಾಡುತ್ತಿದೆ.
ನನ್ನ ತಂದೆಯವರು ಹಾಕಿಕೊಟ್ಟ ಅಡಿಪಾಯ ಇಂದು ನನ್ನ ಇಂಗ್ಲಿಷಿನ ಜ್ಞಾನ ಉನ್ನತ ಮಟ್ಟದಲ್ಲಿರಲು ಕಾರಣವಾಯಿತು.
ಧನ್ಯವಾದಗಳು ಆ ಭುವನೇಶ್ವರದ लड़की ಗೆ ಹಾಗೂ ತೀರ್ಥರೂಪ daddyಗೆ.
No comments:
Post a Comment