Tuesday, 1 December 2020

ಪ್ರೊಮೋಷನ್ promotion


Imaginative story - Time 1980s

ಆರಾಮವಾಗಿ ಮೈಸೂರಿನಲ್ಲಿ ಹನ್ನೆರಡು ವರ್ಷಗಳಿಂದ ಒಂದೇ ಕಚೇರಿಯಲ್ಲಿರುವ ಒಂದೇ ಇಲಾಖೆಯ ಒಂದೇ ಕುರ್ಚಿಯಲ್ಲಿ ಒಂದನೆಯ ದರ್ಜೆಯ ಗುಮಾಸ್ತನ ಕೆಲಸವನ್ನು ಮಾಡಿಕೊಂಡಿದ್ದೆ. ಒಂದೇ ಜಾಗದಲ್ಲಿ ಒಂದೇ ಕುರ್ಚಿಯಲ್ಲಿ ನಿವೃತ್ತಿಯ ದಿನದ ವರೆಗೂ ಕುಳಿತು ಕೆಲಸ ಮಾಡಿದ್ದರೆ Guinness ದಾಖಲೆಯನ್ನಾದರೂ ಮಾಡಬಹುದಿತ್ತೇನೋ. ಆದರೆ ಆ ಲಭ್ಯ ನನಗಾಗಲಿಲ್ಲ. ಕಾರಣ ನಾನು ಕೆಲಸ ಮಾಡುತ್ತಿದ್ದ ಕಚೇರಿಯ ಗೋಡೆ ಬಿದ್ದು ಹೋಗಿ ಮುನಿಸಿಪಾಲಿಟಿಯವರು ವಾಸಿಸಲು ಅಥವಾ ಕಚೇರಿಯನ್ನು ನಡೆಸಲು ಅಯೋಗ್ಯವೆಂದು ಘೋಷಿಸಿದ್ದರು. ಹಾಗಂತಲೇ ನಮ್ಮ ಕಚೇರಿಯನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸಲಾಯಿತು.  ಹಾಗೆಯೇ ಮೈಸೂರು ಮಹಾರಾಜರ ಕಾಲದ ಮೇಜು ಕುರ್ಚಿಗಳನ್ನು ಸಹ scrap ಅಂತ ಪರಿಗಣಿಸಿ ಹೊಸ ಜಾಗದಲ್ಲಿ ಹೊಸ ಕುರ್ಚಿಯಲ್ಲಿ ಹಳೇ ಜನರಾದ ನಾವೆಲ್ಲ ಕೂರಲು ತಯಾರಾದೆವು.

ಗಿನ್ನೆಸ್ ದಾಖಲೆಯೇನೋ ಮುರಿದುಬಿತ್ತು, ಪರವಾಗಿಲ್ಲ. ಕೊನೆಯಪಕ್ಷ ಮೈಸೂರಿನಲ್ಲೇ ಖಾಯಂ ಆಗಿ ಠಿಕಾಣಿ ಹೂಡೋಣವೆಂದು ಯೋಚಿಸುತ್ತಿದ್ದೆ. ಆದರೆ ನನ್ನ ಧರ್ಮ ಪತ್ನಿ, ನಾನು ಪದೋನ್ನತಿ ತೆಗೆದುಕೊಂಡು ಅಧಿಕಾರಿ ಅಗಲೇಬೇಕೆಂದು ಹಠ ಹಿಡಿದಾಗ ಆಫೀಸಿನ ಪ್ರೊಮೋಷನ್ ಸಂದರ್ಶನ ಪರೀಕ್ಷೆಗೆ ತಯಾರಿ ನಡೆಸಲು ನಾನು ಅಲ್ಲ, ನನ್ನಾಕೆ ನಿರ್ಧಾರವನ್ನು ತೆಗೆದುಕೊಂಡಿದ್ದಾಯಿತು.

ಪಕ್ಕಾ ಸೋಮಾರಿಯಾಗಿದ್ದ ನನಗೆ ದಿನವೂ ಓದಿ ಓದಿ ಎಂದು ನನ್ನಾಕೆಯ ಒತ್ತಡ ಗಾಯತ್ರಿ ಮಂತ್ರ ಜಪದಂತೆ ಪ್ರಾರಂಭವಾಯಿತು. ಇದಕ್ಕೆ ತರತರಹದ ಉಪಾಯಗಳನ್ನೂ ಕೂಡ ಹುಡುಕಿದಳು.

ದಿನವೂ ಸಂಜೆ ನಾನು ಮನೆಗೆ ಬರುವುದೇ ಕಾಯ್ದಿದ್ದು ಮಂದಹಾಸದ ನಗೆ ಬೀರಿ ಸ್ವಾಗತಿಸಿದಳು. ಆಫೀಸಿನಲ್ಲಿ ತುಂಬಾ ಕೆಲಸವಿತ್ತೇ, ಮುಖ ಏಕೋ ಇಳಿದಿದೆಯಲ್ಲ, ತಲೆ ನೋವೇ ಎಂದೆಲ್ಲ ಕೇಳಿ ಕುರ್ಚಿಯನ್ನು ನನ್ನ ಮುಂದೆ ಇಟ್ಟು ಕುಳಿತುಕೊಳ್ಳಲು ಹೇಳುತ್ತಾ, ಕೆಳಕ್ಕೆ ಬಗ್ಗಿ ನನ್ನ ಬೂಟುಗಳ ದಾರಗಳನ್ನು ಬಿಚ್ಚುತ್ತಿದ್ದಳು. ನನಗೆ ಕೂಡಲೇ flashback ಮನಸ್ಸಿನ ಮುಂದೆ ಹಾದುಹೋಯಿತು.

ನಾನು ಕೆಲವು ದಿನ ಬಸ್ಸಿಗಾಗಿ ಕಾದು ಕಾದು ಬೇರೆ ಬಸ್ಸು ಹಿಡಿದು ಇನ್ನೆಲ್ಲಿಗೋ ಹೋಗಿ ಮತ್ತಲ್ಲಿಂದ ಮತ್ತೊಂದು ಬಸ್ಸು ಹಿಡಿದು ನಿಜವಾಗಿಯೂ ಸುಸ್ತಾಗಿ ಮನೆಗೆ ಒಂದು ಗಂಟೆ ತಡವಾಗಿ ಬಂದಾಗಲೂ ಇವಳು ಮನೆಯಲ್ಲಿ ಇರುತ್ತಿರಲಿಲ್ಲ. ಅಕ್ಕ ಪಕ್ಕದವರ ಮನೆಗಳಲ್ಲಿ ಕುಳಿತು ಆರಾಮವಾಗಿ ಹರಟೆ ಹೊಡೆಯುತ್ತಿದ್ದಳು.  ನಾನಾದರೋ ಬಕ ಪಕ್ಷಿಯಂತೆ ಮೊದಲು ಸ್ವಲ್ಪ ಹೊತ್ತು  ಕಾದು ನಂತರ ಪಕ್ಕದ ಮನೆ, ಎದುರು ಮನೆ, ಹಿಂದಿನ ಬೀದಿಯ ಎರಡನೆಯ ಮನೆ, ಹೀಗೆಲ್ಲ ಇವಳನ್ನು ಹುಡುಕುತ್ತಾ (ಬೀಗದ ಕೈ ಗೋಸ್ಕರ) ಪರದಾಡಿದ್ದು ಎಷ್ಟೋ ಸಲ. ಇವಳು ಪಕ್ಕದ ಬೀದಿಯಲ್ಲಿರುವ ಆರನೆಯ ಮನೆಯಲ್ಲಿದ್ದಿದ್ದು, ಅವಳನ್ನು ಹುಡುಕಲು ಆ Sherlock Homes ಗೂ ಕೂಡ Watson ಜೊತೆ ಇದ್ದಾಗಲೂ ಕನಿಷ್ಠ ಮೂವತ್ತು ನಿಮಿಷಗಳಾದರೂ ಬೇಕಾಗುತ್ತಿತ್ತೇನೋ. 

ಇವಳಿದ್ದ ಮನೆಯೇನೋ ಪತ್ತೆಮಾಡಿದ್ದಾಯಿತು. ಆ ಸಮಯದಲ್ಲಿ ನನ್ನ ಭಾವನೆಗಳನ್ನು ಸ್ಪಂದಿಸುವವರಿರಲಿ, ನನ್ನ ಮುಖವನ್ನಾದರೂ ಯಾರಾದರೂ ನೋಡಿದ್ದಿದ್ದರೆ, ಖಂಡಿತ ಸಾಂತ್ವನಕ್ಕೆ ಯೋಗ್ಯವೆಂದು ಮರುಕ ಪಡುತ್ತಿದ್ದರು. ಇವಳಾದರೋ ಅವರ ಮನೆಯಲ್ಲಿರುವ ಚಿಕ್ಕ ಮಕ್ಕಳ ಹತ್ತಿರ ಬೀಗದ ಕೈ ಕೊಟ್ಟು ನನಗೆ ಕೊಡಲು ಹೇಳಿ ಇನ್ನೈದು ನಿಮಿಷದಲ್ಲಿ ಬರುತ್ತೇನೆಂದು ಹೇಳಿ ಕಳಿಸುತ್ತಿದ್ದಳು.  

ಆದರೆ ಈಗ ಪರಿಸ್ಥಿತಿಯೇ ಬೇರೆಯಾಗಿದೆ. ನಾನು ಮುಖ ತೊಳೆಯಲು ಬಚ್ಚಲು ಮನೆಗೆ ಹೋಗಿ ಹೊರಗೆ ಬಂದಾಗ ಮತ್ತದೇ ನಗೆ. ಕೈಯಲ್ಲಿ ಟವಲ್ ಹಿಡಿದು ನನಗೆ ಹುಸಿನಗೆ ಬೀರುವುದು ಮತ್ತು ಕಾಫಿ ಐದು ನಿಮಿಷದಲ್ಲಿ ರೆಡಿ. ನಾನೋ ಈ ಸಂದರ್ಶನ ಪರೀಕ್ಷೆ ದಿನ ಕನಿಷ್ಟ ಒಂದು ತಿಂಗಳಾದರೂ ಮುಂದೆ ಹೋಗಲಿ ಎಂದು ಆ ಭಗವಂತನನ್ನು ಪ್ರಾರ್ಥಿಸಲು ಪ್ರಪ್ರಥಮವಾಗಿ  ಪ್ರಾರಂಭಿಸಿದೆ. ಈ vip ಉಪಚಾರ ಆ ದಿನದವರೆಗಂತೂ ಖಚಿತ. ಇವಳು ದೇವರ ಕೋಣೆಗೆ ನನ್ನನ್ನೂ ಕರೆದೊಯ್ಯುತ್ತಿದ್ದಳು. ಏಕೆಂದರೆ ಇವಳ ಹರಕೆಯನ್ನು ದಿನವೂ ಭಗವಂತನಲ್ಲಿ ಜ್ಞಾಪಿಸಬೇಕಲ್ಲವೇ. ನಾನೂ ಜೊತೆಯಲ್ಲಿದ್ದರೆ ದೇವರಲ್ಲಿ ಪ್ರಭಾವ ಬೀರುವುದು ಜಾಸ್ತಿ ಅಗಬಹುದೆಂಬದು ಇವಳ ಯೋಚನೆ. 

ಆ ದೇವರು ನಂಬಿದ ಭಕ್ತರನ್ನು ಕೈಬಿಡುವುದಿಲ್ಲವಂತೆ. ಆದರೆ ನನಗೆ ಮಾತ್ರ ಕೈಕೊಟ್ಟ. Interview ದಿನ ಮುಂದೆ ಹೋಗಲೇ ಇಲ್ಲ, ಹಾಗೆಯೇ ಇವಳ ಪ್ರಾರ್ಥನೆಯಂತೆ ನನಗೆ ಪ್ರೊಮೋಷನ್ ಕೂಡ ಕೊಡಿಸಿಬಿಟ್ಟಿದ್ದ. ಇವೆರಡೂ ವಿಷಯಗಳಲ್ಲಿ ಬಹುಷಃ ಆ ದೇವರು ಭಕ್ತರ ಜ್ಯೇಷ್ಟತೆ (seniority) ನೋಡಿದ್ದನೆಂದು ನನಗನಿಸುತ್ತದೆ. ನನ್ನಂಥಹ ಹೊಸ ಭಕ್ತರಿಗಿಂತ ಶಾಶ್ವತ ಭಕ್ತರ ಮಾತನ್ನು ಕೇಳಿದ ಆ ಭಗವಂತನಿಗೆ ಸದಸ್ಯತ್ವ ವಿಸ್ತರಣೆ (membership development) ಬಗ್ಗೆ ಚಿಂತೆ ಇಲ್ಲವೇನೋ, ಅಥವಾ ನಾನು ಕೇವಲ ಅಲ್ಪಕಾಲಿಕ ಸದಸ್ಯ (temporary member) ಅಂತಲೂ ಭಾವಿಸಿರಬಹುದೇನೋ.  

ಅಂತೂ ಪ್ರೊಮೋಷನ್ ಫಲಿತಾಂಶದ ಪಟ್ಟಿಯಲ್ಲಿ ನನ್ನ ಹೆಸರು ಇದ್ದಿದ್ದು ನನಗೆ ಮಾತ್ರ ರಸದಲ್ಲಿ ಕಸ ಸಿಕ್ಕಿದಹಾಗೆ ಆಯಿತು. ಕಾರಣ ನನ್ನನ್ನು ದೂರದ ಊರಾದ ದೆಹಲಿಗೆ ವರ್ಗ ಮಾಡಿದ ವಿಷಯನ್ನು ಕೇಳಿದಾಗ. ವರ್ಗಾವಣೆ ವಿಷಯದಲ್ಲಿ ಇವಳು ಯಾವ ಹರಕೆಯನ್ನೂ ದೇವರ ಮುಂದೆ ಹೇಳಿಕೊಳ್ಳದ್ದು ಈ ದುರಂತಕ್ಕೆ ಕಾರಣವಾಗಿರಬಹುದೇ?

ಇವಳಾದರೋ ಬಹಳಷ್ಟು ಖುಷಿಯಿಂದಲೇ ಡೆಲ್ಲಿಗೆ ಹೋಗುತ್ತಿದ್ದೇವೆಂದು, ಯಜಮಾನರಿಗೆ ದೊಡ್ಡ ಪ್ರೊಮೋಷನ್ ಸಿಕ್ಕಿದೆಯೆಂದು ಊರಿನಲ್ಲೆಲ್ಲ ಸಾರಿಕೊಂಡು ಬಂದಳು. ಆದರೆ ನನಗಂತೂ ಸ್ವಲ್ಪವೂ ಸಂತೋಷವಿರಲಿಲ್ಲ, ಏಕೆಂದರೆ, ಒಮ್ಮೆ ಮೈಸೂರು ಬಿಟ್ಟರೆ ಮತ್ತೆ ಹಿಂದುರುಗಿ ಬರುವ ಕನಸು ಕನಸಾಗೆ ಉಳಿಯಬಹುದೆಂಬ ಅಭಿಪ್ರಾಯ ಕಚೇರಿಯಲ್ಲಿ ಇರುವವರದ್ದಾಗಿತ್ತು. ಎರಡನೆಯದಾಗಿ, ನನಗೆ ಹಿಂದಿ ಭಾಷೆ ಸರಿಯಾಗಿ ಬರದೆ ಇರುವುದು ಮತ್ತು ಭಾಷಾ ಜ್ಞಾನವಿಲ್ಲದೆ ಅಂತಹ ದೊಡ್ಡ ನಗರದಲ್ಲಿ ಹೇಗಪ್ಪಾ ದಿನಗಳನ್ನು ದೂಡುವುದು. ಮೂರನೆಯದಾಗಿ, ದೇಹಲಿಯಂಥಹ ದೊಡ್ಡ ಕಚೇರಿಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವೇ.  ಹೀಗೆ ಎಣಿಸುತ್ತಾ ಹೋದಂತೆ ನನಗೆ ಮುಂದೆ ಬರುವಂತಹ ಅನಾನುಕೂಲತೆಗಳು ಹೆಚ್ಚುತ್ತಾ ಹೋದಂತೆ ಭಾಸವಾಯ್ತು.

ನೀರಿಗೆ ಬಿದ್ದಮೇಲೆ ಈಜಲೇ ಬೇಕಲ್ಲವೇ. ನನ್ನ ಆತ್ಮವಿಶ್ವಾಸವನ್ನು ಗಟ್ಟಿಮಾಡಿಕೊಂಡು ಬಂದದ್ದೆಲ್ಲ ಬರಲಿ ಆ ಗೋವಿಂದನ ದಯೆ ಇರಲಿ ಎಂದು ನಿಜವಾಗಿಯೂ ಆ ದೇವರ (ಆತ್ಮ ವಿಶ್ವಾಸ!) ಮೇಲಿನ ಭಕ್ತಿ ನನ್ನ ಮನಸ್ಸಿನಲ್ಲಿ ಬೇರೂರಿತು. ನನ್ನಾಕೆ ಕೊಟ್ಟ ಧೈರ್ಯ, ಪ್ರೋತ್ಸಾಹ, ದೆಹಲಿಗೆ ಬಂದಮೇಲೆ ಅವಳು ಕೊಟ್ಟ ಸಹಕಾರ ದಿನೇದಿನೇ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು.  

ಆ ದಿನದ ನನ್ನವಳ ಪ್ರತಿಷ್ಠೆಯ ಫಲವೋ ಏನೋ ನನ್ನ ಜೀವನದ ಶೈಲಿಯನ್ನೇ ಬದಲಾಯಿಸಿದ ಅಂದಿನ ನನ್ನ ಮೊದಲ ಬಡ್ತಿ ನಾನು ಎಂಥಹ ಸಮರವನ್ನೂ ಸಹ ಎದುರಿಸುವ ಶಕ್ತಿ ನನ್ನ ಆತ್ಮವಿಶ್ವಾಸ ತಂದುಕೊಟ್ಟಿತು. ಅದರ ಫಲದಂತೆ ಇಂದು ನಾನು ಅದೇ ಮೈಸೂರು ಕಚೇರಿಯ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು.

end- elloo ನಡೆದದ್ದು ಅಲ್ಲ imagination written sometime ಇನ್ 2002

.
back to  

end.

.

No comments:

Post a Comment